ಟೆಕ್ಸಾಸ್ನ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್ಪೋರ್ಟ್ನಲ್ಲಿ ನಡೆದ ವೈಮಾನಿಕ ಹಾರಾಟ ಪ್ರದರ್ಶನದ ವೇಳೆ ಎರಡು ವಿಮಾನಗಳು ಡಿಕ್ಕಿಹೊಡೆದು ದೊಡ್ಡ ಅವಘಡ ನಡೆದಿದೆ. ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 2ನೇ ವಿಶ್ವಯುದ್ಧದ ಸ್ಮರಣಾರ್ಥವಾಗಿ ಈ ಏರ್ಶೋ ನಡೆದಿತ್ತು. (ಇದನ್ನು ಅಮೆರಿಕದ ಪ್ರೀಮಿಯರ್ ವರ್ಲ್ಡ್ ವಾರ್ ಏರ್ಶೋ ಎಂದೇ ಕರೆಯಲಾಗುತ್ತದೆ). ಸುಮಾರು 40 ವಿಮಾನಗಳು ವೈಮಾನಿಕ ಹಾರಾಟ ಪ್ರದರ್ಶನ ನಡೆಸುತ್ತಿದ್ದವು. ವೀಕೆಂಡ್ ಆಗಿದ್ದರಿಂದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಆದರೆ ಅದೊಂದು ದುರಂತವಾಗಿ ಮಾರ್ಪಾಟಾಗಿದೆ. ಏರ್ಶೋದಲ್ಲಿ ಪಾಲ್ಗೊಂಡಿದ್ದ ಬೋಯಿಂಗ್ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ-63 ಕಿಂಗ್‌ಕೋಬ್ರಾ ಡಿಕ್ಕಿಯಾಗಿ, ಸ್ಫೋಟಗೊಂಡಿವೆ. ಈ ಎರಡೂ ವಿಮಾನಗಳು 2ನೇ ವಿಶ್ವಯುದ್ಧ ಕಾಲದವೇ ಆಗಿದ್ದವು. ಸ್ಫೋಟದ ರಭಸಕ್ಕೆ ಚೂರುಚೂರಾಗಿ ಹೋಗಿವೆ. ಎರಡೂ ವಿಮಾನಗಳಿಂದ ಒಟ್ಟು ಆರು ಮಂದಿ ಇದ್ದರು. ಅವರ್ಯಾರೂ ಬದುಕಿಲ್ಲ ಎಂದು ಹೇಳಲಾಗಿದೆ.
‘ನಾನು ವೈಮಾನಿಕ ಹಾರಾಟ ಪ್ರದರ್ಶನ ನೋಡುತ್ತ ನಿಂತಿದ್ದೆ. ನನ್ನ ಕಣ್ಣೆದುರಿಗೇ ಎರಡು ವಿಮಾನಗಳು ಡಿಕ್ಕಿಯಾಗಿ ಬಿದ್ದವು. ನನಗೆ ದೊಡ್ಡ ಶಾಕ್ ಆಯಿತು’ ಎಂದು ದುರಂತವನ್ನು ಪ್ರತ್ಯಕ್ಷವಾಗಿ ನೋಡಿದ ಮೊನೊಟೊಯಾ (27) ಹೇಳಿದ್ದಾರೆ. ಟ್ವೀಟ್ ಮಾಡಿರುವ ಡೆಲ್ಲಾಸ್ ಮೇಯರ್ ಎರಿಕ್ ಜಾನ್ಸನ್, ‘ವಿಮಾನಗಳ ಅಪಘಾತವಾದ ವಿಡಿಯೊ ನೋಡಿದರೆ ಎಂಥವರ ಹೃದಯವಾದರೂ ಒಂದು ಸಲ ನಡುಗುತ್ತದೆ’ ಎಂದು ಹೇಳಿದ್ದಾರೆ.
ಇದರಲ್ಲಿ ಬೋಯಿಂಗ್ ಬಿ-17 ವಿಮಾನ ನಾಲ್ಕು ಎಂಜಿನ್ಗಳ ಬಾಂಬರ್ ವಿಮಾನವಾಗಿದ್ದು, ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿಯ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿತ್ತು. ಹಾಗೇ, ಕಿಂಗ್‌ಕೋಬ್ರಾ ಯುಎಸ್ ಯುದ್ಧ ವಿಮಾನವಾಗಿದ್ದು, ವಿಶ್ವಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಪಡೆಗಳ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿತ್ತು. 2ನೇ ವಿಶ್ವ ಯುದ್ಧ ನಡೆದದ್ದು 1939ರಿಂದ 1945ರವರೆಗೆ. ಆ ಕಾಲದ ವಿಮಾನಗಳು ಇರುವುದೇ ಕಷ್ಟ. ಇದ್ದರೂ ಹಾರಾಟದ ಸ್ಥಿತಿಯಲ್ಲಿ ಇರುವುದು ತೀರ ವಿರಳ. ಅಂಥದ್ದರಲ್ಲಿ ಈ ಎರಡೂ ವಿಮಾನಗಳು ಸುಸ್ಥಿರವಾಗಿಯೇ ಇದ್ದವು ಎಂದಿದ್ದಾರೆ ತಜ್ಞರು. ಹಾಗಂತ ಈ ಎರಡೂ ವಿಮಾನಗಳು ಖಾಯಂ ಆಗಿ ಹಾರಾಟ ನಡೆಸುತ್ತಿಲ್ಲ. ವೈಮಾನಿಕ ಪ್ರದರ್ಶನ ಮುಗಿದ ಬಳಿಕ ಮತ್ತೆ ಮ್ಯೂಸಿಯಂನಲ್ಲೇ ಇಡಲಾಗುತ್ತಿತ್ತು ಎನ್ನಲಾಗಿದೆ. ಇನ್ನು ಈ ಏರ್ಶೋದಲ್ಲಿ ಬಿ-17 ವಿಮಾನ ತುಂಬ ಕೆಳಗೆ ಹಾರಾಡುತ್ತಿತ್ತು. ಹಿಂಬದಿಯಿಂದ ವೇಗವಾಗಿ ಬಂದ ಕಿಂಗ್‌ಕೋಬ್ರಾ ರಭಸದಿಂದ ಡಿಕ್ಕಿ ಹೊಡೆದಿದೆ ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನಿದ್ದೆಗೆ ಜಾರಿದ್ದ ಇಬ್ಬರೂ ಪೈಲಟ್ಗಳು; ಆದರೂ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಹೇಗೆ?