ಗ್ರೀಸ್ ದೇಶದ ಲಾರಿಸ್ಸಾ ನಗರದಲ್ಲಿ ಭೀಕರ ರೈಲು ಅಪಘಾತ (Greece Train Crash) ನಡೆದಿದೆ. ಎರಡು ರೈಲುಗಳು ಡಿಕ್ಕಿಯಾಗಿ 32 ಮಂದಿ ಮೃತಪಟ್ಟಿದ್ದು, 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಡಿಕ್ಕಿಯ ರಭಸಕ್ಕೆ ರೈಲುಗಳ ಎರಡು ಕ್ಯಾರೇಜ್ಗಳಿಗೆ ಬೆಂಕಿ ಬಿದ್ದು, ಸುಟ್ಟುಹೋಗಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ಅಗ್ನಿಶಾಮಕದಳ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೇ, ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಹೆಲೆನಿಕ್ ಟ್ರೇನ್ ಎಂಬ ಖಾಸಗಿ ಗ್ರೀಕ್ ರೈಲ್ವೆ ಕಂಪನಿಗೆ ಸೇರಿದ ಪ್ರಯಾಣಿಕರ ರೈಲೊಂದು ಅಥೆನ್ಸ್ನಿಂದ ಥೆಸಲೋನಿಕಿ ನಗರಕ್ಕೆ ಪ್ರಯಾಣ ಮಾಡುತ್ತಿತ್ತು. ಈ ರೈಲಿನಲ್ಲಿ 350 ಮಂದಿ ಪ್ರಯಾಣಿಕರು ಇದ್ದರು. ಟೆಂಪ್ ವ್ಯಾಲಿ ಎಂಬಲ್ಲಿ ಈ ರೈಲಿಗೆ ಸರಕು ಸಾಗಣೆ ರೈಲೊಂದು ಡಿಕ್ಕಿಯಾಗಿದೆ. ಎರಡೂ ರೈಲುಗಳ ಬೋಗಿಗಳಿಗೆ ಹಾನಿಯಾಗಿದೆ. ಪ್ರಯಾಣಿಕರು ಇದ್ದ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಬಿದ್ದು, ಅವರು ಹಳಿ ತಪ್ಪಿ ಬಿದ್ದಿವೆ. ಹೀಗೆ ಹಳಿ ತಪ್ಪಿ ಬಿದ್ದ ಬೋಗಿಗಳ ಅವಶೇಷಗಳಡಿಯಿಂದ ಪ್ರಯಾಣಿಕರನ್ನು ಹೊರಗೆತೆಗೆಯಲು ಹಲವು ತಾಸುಗಳ ಕಾರ್ಯಾಚರಣೆಯನ್ನೇ ನಡೆಸಬೇಕಾಯಿತು ಎಂದು ಅಗ್ನಿಶಾಮಕದಳದ ವಕ್ತಾರ ಹೇಳಿದ್ದಾರೆ. ರೈಲುಗಳ ಅಪಘಾತದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.