ಢಾಕಾ: ಬಾಂಗ್ಲಾದೇಶದ ಸೀತಾಕುಂಡಾದಲ್ಲಿರುವ ಬಿಎಂ ಒಳನಾಡು ಕಂಟೇನರ್ ಡಿಪೋ (ICD)ದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, 35 ಮಂದಿ ಮೃತಪಟ್ಟಿದ್ದಾರೆ. ಇದೊಂದು ಖಾಸಗಿ ಡಿಪೋ ಆಗಿದ್ದು ಬಾಂಗ್ಲಾದ ಚಿತ್ತಗಾಂಗ್‌ನಲ್ಲಿರುವ ಮುಖ್ಯ ಬಂದರಿನ ಸಮೀಪದಲ್ಲಿಯೇ ಇದೆ. ದುರ್ಘಟನೆಯಲ್ಲಿ 45ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇಲ್ಲಿ ಶನಿವಾರ ರಾತ್ರಿ 9 ಗಂಟೆ ಹೊತ್ತಿಗೆ ಬೆಂಕಿ ಅವಘಡ ನಡೆದಿದೆ. ಅಗ್ನಿ ಶಾಮಕದಳದವರು ಆಗಮಿಸಿ, ಬೆಂಕಿ ನಂದಿಸುತ್ತಿರುವಾಗಲೇ ರಾತ್ರಿ 11.45ರ ವೇಳೆಗೆ ಮತ್ತೊಮ್ಮೆ ಸ್ಫೋಟ ಉಂಟಾಗಿದೆ. ಇದುವರೆಗೆ 40 ಮೃತ ದೇಹಗಳನ್ನು ಶವಾಗಾರಕ್ಕೆ ಕಳಿಸಲಾಗಿದೆ. ಗಾಯಗೊಂಡವರನ್ನು ಚತ್ತಗ್ರಾಮ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಬ್ ಇನ್ಸ್‌ಪೆಕ್ಟರ್ ನೂರುಲ್ ಆಲಂ ಹೇಳಿದ್ದಾರೆ.
ಡಿಪೋದಲ್ಲಿರುವ ಒಂದು ಕಂಟೇನರ್‌ನಲ್ಲಿ ಹೈಡ್ರೋಜನ್ ಪೆರೋಕ್ಸೈಡ್ ಇತ್ತು (ಸಾಮಾನ್ಯವಾಗಿ ಈ ರಾಸಾಯನಿಕವನ್ನು ಕೈಗಾರಿಕೆಗಳಲ್ಲಿ ಆಕ್ಸಿಡೈಸರ್, ಬ್ಲೀಚಿಂಗ್ ಮತ್ತು ನಂಜು ನಿರೋಧಕವಾಗಿ ಬಳಸಲಾಗುತ್ತದೆ). ಇದೇ ಬೆಂಕಿ ಹೊತ್ತಿಕೊಳ್ಳಲು ಮೂಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಅಂದಾಜಿಸಿದ್ದಾರೆ. ಸ್ಫೋಟದಿಂದಾಗಿ ಬೆಂಕಿ ಮತ್ತಷ್ಟು ವೇಗವಾಗಿ ಹರಡಿದೆ. ಸಮೀಪದ ಕೆಲವು ಮನೆಗಳೂ ಅರ್ಧಂಬರ್ಧ ಸುಟ್ಟಿವೆ ಎಂದು ಚಿತ್ತಗಾಂಗ್ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಸಹಾಯಕ ನಿರ್ದೇಶಕ ಎಂಡಿ ಫಾರೂಕ್ ಹೊಸೈನ್ ಸಿಕ್ದಾ ತಿಳಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕದಳದ ಸುಮಾರು 19 ಘಟಕಗಳು ಇಲ್ಲಿಗೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊಸಳೆಗಳಿಗೂ ಅಂಜದೆ ಈಜಿಕೊಂಡೇ ಭಾರತಕ್ಕೆ ಬಂದು ಪ್ರಿಯತಮನ ತೆಕ್ಕೆ ಸೇರಿದ ಬಾಂಗ್ಲಾ ಯುವತಿ
ಅವಘಡ ನಡೆದ ಬಿಎಂ ಕಂಟೇನರ್ ಡಿಪೋದ ನಿರ್ದೇಶಕ ಮುಜಿಬುರ್ ರೆಹ್‌ಮಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಬೆಂಕಿ ಹೊತ್ತಿಕೊಳ್ಳಲು ಕಾರಣ ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಒಂದು ಕಂಟೇನರ್‌ನಿಂದ ಶುರುವಾದ ಬೆಂಕಿ ಭಯಂಕರವಾಗಿ ಹೊತ್ತಿ ಉರಿಯಿತು. ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲು ಎಲ್ಲ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಅವರ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ನಾವೇ ಭರಿಸುತ್ತೇವೆ ಮತ್ತು ಮೃತರ ಕುಟುಂಗಳಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ.
ಬಿಎಂ ಕಂಟೇನರ್ ಡಿಪೋವನ್ನು 2011ರಲ್ಲಿ ಒಳನಾಡು ಕಂಟೇನರ್ ಡಿಪೋವಾಗಿ ಪರಿವರ್ತಿಸಲಾಗಿದೆ. ಅದೇ ವರ್ಷ ಮೇ ತಿಂಗಳಿನಿಂದಲ ಕಾರ್ಯ ನಿರ್ವಹಿಸುತ್ತಿದೆ. ಸೀತಾಕುಂಡದಲ್ಲಿ 21 ಎಕರೆ ಪ್ರದೇಶದಲ್ಲಿ ಈ ಡಿಪೋ ಇದೆ. ಬಂಗಾಳಕೊಲ್ಲಿಯ ಕರಾವಳಿ ತೀರಕ್ಕೆ ಇದು ಹೊಂದಿಕೊಂಡಿದೆ. ಒಳನಾಡು ಕಂಟೇನರ್ ಡಿಪೋ ಎಂದರೆ ಒಣ ಬಂದರು. ಇದು ರಸ್ತೆ ಅಥವಾ ರೈಲು ಮಾರ್ಗದಿಂದ ನೇರವಾಗಿ ಮುಖ್ಯ ಬಂದರಿಗೆ ಸಂಪರ್ಕ ಸಾಧಿಸುತ್ತದೆ. ಈ ಮೂಲಕ ಸಮುದ್ರ ಮಾರ್ಗದಲ್ಲಿ ಸಾಗಣೆಯಾಗಿ ಬರುವ ಸರಕುಗಳನ್ನು ಒಳನಾಡಿನ ಪ್ರದೇಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಾರಾಣಸಿ ದೇವಾಲಯದಲ್ಲಿ ಸ್ಫೋಟ ನಡೆದ 16 ವರ್ಷಗಳ ಬಳಿಕ ಉಗ್ರನಿಗೆ ಶಿಕ್ಷೆ