ಟೋಕಿಯೋ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ಗುಂಡಿನ ದಾಳಿಯಾಗಿದ್ದು ಅವರ ಸ್ಥಿತಿಯೀಗ ಚಿಂತಾಜನಕವಾಗಿದೆ. ಜಪಾನ್ ಪಶ್ಚಿಮ ನಗರದವಾದ ನಾರಾದಲ್ಲಿ ಅವರು ಭಾಷಣ ಮಾಡುತ್ತಿದ್ದಾಗ ಒಮ್ಮಿಂದೊಮ್ಮೆಲೆ ಅವರು ಕುಸಿದುಬಿದ್ದರು. ಎದೆಯೆಲ್ಲ ರಕ್ತಸಿಕ್ತವಾಗಿತ್ತು. ನೆಲದ ಮೇಲೆ ಕುಸಿದ ಅವರಿಗೆ ಹೃದಯ ಸ್ತಂಭನ ಆಗಿ, ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಎಚ್ಚರ ತಪ್ಪಿದ ಅವರಿಗೆ ಸ್ಥಳದಲ್ಲಿದ್ದವರು ತಕ್ಷಣವೇ ಸಿಪಿಆರ್ ಚಿಕಿತ್ಸೆ (ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಚಿಕಿತ್ಸೆ) ನೀಡಿ, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಥಳದಲ್ಲಿ ತುಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜಪಾನ್ ಸಂಸತ್ತಿನ ಮೇಲ್ಮನೆ ಚುನಾವಣೆ ಜುಲೈ 10ಕ್ಕೆ ನಡೆಯಲಿದ್ದು, ಅದರ ನಿಮಿತ್ತ ಶಿಂಜೊ ಪ್ರಚಾರಕ್ಕೆಂದು ನರಾ ನಗರಕ್ಕೆ ತೆರಳಿದ್ದರು. ಜಪಾನ್ ಕಾಲಮಾನದಲ್ಲಿ ಬೆಳಗ್ಗೆ 11.30ರ ಹೊತ್ತಿಗೆ ರಸ್ತೆಯೊಂದರ ಬದಿಯಲ್ಲಿ ನಿಂತು ಅವರು ಭಾಷಣ ಮಾಡುತ್ತಿದ್ದರು. ಆಗ ಒಮ್ಮಿಂದೊಮ್ಮೆಲೇ ಗುಂಡಿನ ಶಬ್ದ ಕೇಳಿಬಂತು. ಶಿಂಜೋ ರಕ್ತಸಿಕ್ತರಾಗಿ ಬಿದ್ದಿದ್ದರು.
ಪ್ರತ್ಯಕ್ಷ ದರ್ಶಿ ಮಹಿಳೆಯೊಬ್ಬರು ಈ ಬಗ್ಗೆ ಜಪಾನ್‌ನ ಸುದ್ದಿ ಮಾಧ್ಯಮ ಎನ್‌ಎಚ್‌ಕೆ ಗೆ ಮಾಹಿತಿ ನೀಡಿದ್ದಾರೆ. ಮೊದಲೊಂದು ಗುಂಡಿನ ಶಬ್ದ ಕೇಳಿತು. ಅದೇನೂ ಅಷ್ಟು ತೀವ್ರವಾಗಿರಲಿಲ್ಲ. ಅದೊಂದು ಆಟಿಕೆಯೆಂದು ಎನ್ನಿಸಿತು. ಆದರೆ ಎರಡನೇ ಗುಂಡು ತೀವ್ರವಾಗಿತ್ತು. ದೊಡ್ಡದಾಗಿ ಶಬ್ದ ಕೇಳಿಬಂತು ಮತ್ತು ಹೊಗೆಯೂ ಎದ್ದಿತು. ಆಗ ಶಿಂಜೋ ನೆಲಕ್ಕೆ ಬಿದ್ದಿದ್ದರು ಎಂದು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆದ ಮೇಲೆ ಸ್ಥಳದಿಂದ ಓಡಿ ಹೋಗುತ್ತಿದ್ದ 41ವರ್ಷದ ತೆಟ್ಸಾಯ ಯಾಮಗಾಮಿ ಎಂಬಾತನನ್ನು ಶಿಂಜೊ ಸೆಕ್ಯೂರಿಟಿ ಸಿಬ್ಬಂದಿ ಅಲ್ಲಿಯೇ ಹಿಡಿದಿದ್ದಾರೆ. ಆತ ಬೂದು ಬಣ್ಣದ ಟಿ ಶರ್ಟ್-ಪ್ಯಾಂಟ್ ಹಾಕಿದ್ದ. ಇನ್ನು ಶಿಂಜೊ ಅವರ ಮೇಲೆ ದಾಳಿಯಾದ ಜಾಗದಲ್ಲಿ ಸಿಕ್ಕಿರುವ ಗನ್‌ನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳದ ಫೋಟೋ-ವಿಡಿಯೋಗಳು ವೈರಲ್ ಆಗಿವೆ. ಇನ್ನೊಂದೆಡೆ ಶಿಂಜೊ ಅವರ ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹಾಗೇ, ಶಿಂಜೊ ಅಬೆ ಅವರ ಮೇಲೆ ಗುಂಡಿನ ದಾಳಿಯಾಗಿದ್ದರ ಬಗ್ಗೆ ಜಪಾನ್ ಪ್ರಧಾನಿ ಫ್ಯುಮಿಯೋ ಕಿಶಿದಾ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಕ್ಯಾಬಿನೆಟ್‌ನ ಮುಖ್ಯ ಕಾರ್ಯದರ್ಶಿ ಹಿರೆಕಾಝು ಮಾತ್ಸುನೋ ತಿಳಿಸಿದ್ದಾರೆ.
ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಎದೆಗೆ ಗುಂಡೇಟು, ಚಿಂತಾಜನಕ ಸ್ಥಿತಿ