ಟೆಕ್ಸಾಸ್: ಯುಎಸ್‌ನ ಟೆಕ್ಸಾಸ್ ರಾಜ್ಯದ ಸ್ಯಾನ್ ಅಂಟೋನಿಯೋದಲ್ಲಿ ದೊಡ್ಡಮಟ್ಟದ ದುರಂತವೊಂದು ನಡೆದಿದೆ. 46 ವಲಸಿಗರು ಸೆಮಿ ಟ್ರಕ್ ಟ್ರೇಲರ್‌ನಲ್ಲಿ ಶವವಾಗಿದ್ದಾರೆ. ಇತ್ತೀಚಿನ ದಿನಗಳಲ್ಲೇ ಇದು ಭೀಕರ ಮಾನವ ದುರಂತ ಎಂದು ಸ್ಥಳೀಯ ಮೇಯರ್ ರಾನ್ ನಿರೆನ್ಬರ್ಗ್ ಹೇಳಿದ್ದಾರೆ. ಇಷ್ಟು ಸಂಖ್ಯೆಯ ವಲಸಿಗರು ಟ್ರಕ್‌ವೊಂದರಲ್ಲಿ ಪ್ರಯಾಣ ಮಾಡುತ್ತಿದ್ದುದನ್ನು ನೋಡಿದರೆ ಇದೊಂದು ಮಾನವ ಕಳ್ಳಸಾಗಣೆಯ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಯಾನ್ ಅಂಟೋನಿಯೋ ನಗರದ ದಕ್ಷಿಣ ಹೊರವಲಯದಲ್ಲಿರುವ ಒಂದು ದುರ್ಗಮ ಪ್ರದೇಶದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಈ ಟ್ರಕ್ ನಿಂತಿದ್ದು ಅದರಲ್ಲಿ ಇರುವ ಮುಕ್ಕಾಲು ಭಾಗ ಜನ ಉಸಿರು ನಿಲ್ಲಿಸಿದ್ದಾರೆ. 46 ಜನರು ಮೃತಪಟ್ಟಿದ್ದಲ್ಲದೆ, ನಾಲ್ವರು ಅಪ್ರಾಪ್ತರು ಸೇರಿ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ತುಂಬ ಬಳಲಿದ್ದರು. ಉಸಿರಾಟವೂ ಸಾಧ್ಯವಾಗದೆ ಅಸ್ವಸ್ಥರಾಗಿದ್ದರು. ಹಾಗೇ, ಘಟನೆಗೆ ಸಂಬಂಧಪಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಕೌನ್ಸಿಲ್ ಮುಖ್ಯಸ್ಥೆ ಆಡಿಯಾನಾ ರೋಚಾ ಗಾರ್ಸಿಯಾ ತಿಳಿಸಿದ್ದಾರೆ.
ಹೀಗೊಂದು ದುರಂತ ಮೊಟ್ಟಮೊದಲು ಬೆಳಕಿಗೆ ಬಂದಿದ್ದು ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ. ಆ ಟ್ರಕ್ ನಿಂತ ಸ್ವಲ್ಪ ದೂರದಲ್ಲಿ ಒಂದು ಕಟ್ಟಡದಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ. ಯಾರೋ ಅಳುತ್ತಿರುವ, ಸಹಾಯಕ್ಕಾಗಿ ಕೂಗುತ್ತಿರುವ ಧ್ವನಿ ಕೇಳಿ ಅಲ್ಲಿಗೆ ಓಡಿದ. ಧ್ವನಿಯನ್ನು ಆಲಿಸುತ್ತ ಹೋದಾಗ ಈ ಟ್ರಕ್‌ನ ಬಾಗಿಲು ಭಾಗಶಃ ತೆರೆದಿರುವುದು ಮತ್ತು ಅದರದ್ದಲ್ಲಿದ್ದ ಅನೇಕರು ತೀವ್ರ ಅಸ್ವಸ್ಥರಾಗಿರುವುದು ಅವನಿಗೆ ಕಾಣಿಸಿತ್ತು. ಅನೇಕರ ಜೀವ ಅಷ್ಟರಲ್ಲೇ ಹೋಗಿತ್ತು. ನಂತರ ಆ ಕೆಲಸಗಾರ ನಮಗೆ ಮಾಹಿತಿ ನೀಡಿದ ಎಂದು ಸ್ಯಾನ್ ಅಂಟೋನಿಯೋ ಮುಖ್ಯಸ್ಥ ಬಿಲ್ ಮ್ಯಾಕ್‌ಮಾನಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸಾವಿಗೆ ನಿಖರವಾದ ಕಾರಣವಿನ್ನೂ ಸ್ಪಷ್ಟವಾಗದೆ ಇದ್ದರೂ ಇದು ಮಿತಿಮೀರದ ಉಷ್ಣತೆಯಿಂದಾದ ದುರಂತ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದೂ ಹೇಳಲಾಗಿದೆ. ಸ್ಯಾನ್ ಅಂಟೋನಿಯೋದಲ್ಲಿ ಸೋಮವಾರ ಉಷ್ಣತೆ 90-100 ಡಿಗ್ರಿ ಫ್ಯಾರನ್ಹೀಟ್‌ಗೆ ತಲುಪಿತ್ತು ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ.
ಇದನ್ನೂ ಓದಿ: ʼನೀನಿಲ್ಲದೆ ನಾನಿರಲಾರೆʼ-ಟೆಕ್ಸಾಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಶಿಕ್ಷಕಿ ಪತಿಯೂ ಸಾವು
ಹೀಗೆ ಒಂದು ಟ್ರಕ್‌ನಲ್ಲಿ ಇಷ್ಟೊಂದು ಸಂಖ್ಯೆಯ ವಲಸಿಗರು ಎಲ್ಲಿಗೆ ಹೋಗುತ್ತಿದ್ದರು? ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದ್ದು, ಇದೊಂದು ಮಾನವ ಕಳ್ಳಸಾಗಣೆ ಎಂಬ ವರದಿಗಳೂ ಹುಟ್ಟಿಕೊಂಡಿವೆ. ಅದರಲ್ಲೂ ಇತ್ತೀಚೆಗೆ ಮೆಕ್ಸಿಕೋ-ಯುಎಸ್ ಗಡಿಯಲ್ಲಿ ಮಾನವರನ್ನು ಸಾಗಣೆ ಮಾಡುವ ಪ್ರಮಾಣ ಹೆಚ್ಚುತ್ತಿದೆ. ಈ ವಿಚಾರದಲ್ಲಿ ಮೆಕ್ಸಿಕೋ ಮೊದಲಿನಿಂದಲೂ ಕುಖ್ಯಾತಿ ಪಡೆದಿದೆ. ಲೈಂಗಿಕವಾಗಿ ಬಳಸಿಕೊಳ್ಳಲು, ಬಲವಂತವಾಗಿ ದುಡಿಸಿಕೊಳ್ಳಲು, ಸಾಲ ಮಾಡಿದವರು ಅದನ್ನು ತೀರಿಸಲು ಸಾಧ್ಯವಾಗದೆ ಇದ್ದಾಗ ಅಂಥವರನ್ನು ಗುಲಾಮರನ್ನಾಗಿ ಬಳಸಿಕೊಳ್ಳಲು ಕರೆದೊಯ್ಯಲಾಗುತ್ತದೆ. ಈ ವಲಸಿಗರನ್ನೂ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಟೆಕ್ಸಾಸ್ ಶೂಟೌಟ್; ಮಕ್ಕಳು ಬೇಡಿ ಕೊಳ್ಳುತ್ತಿದ್ದರೂ 45 ನಿಮಿಷ ಹೊರಗೇ ನಿಂತಿದ್ದರು ಪೊಲೀಸ್