ಜಕಾರ್ತಾ: ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯದಲ್ಲಿರುವ ಸುಮಾತ್ರಾ ದ್ವೀಪದಲ್ಲಿ ಇಂದು ಪ್ರಬಲ ಭೂಕಂಪ ಉಂಟಾಗಿದೆ (Indonesia Earthquake). ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾದ ಭೂಭೌತಶಾಸ್ತ್ರ ಏಜೆನ್ಸಿ (BMKG) ‘ಸುನಾಮಿ’ ಎಚ್ಚರಿಕೆಯನ್ನು ನೀಡಿದೆ. ಜಕಾರ್ತಾದ ಕಾಲಮಾನದ ಪ್ರಕಾರ ಮಂಗಳವಾರ ಮುಂಜಾನೆ (ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಸಂಜೆ 8ಗಂಟೆ) 3ಗಂಟೆ ಹೊತ್ತಿಗೆ, ಸಾಗರತಳದಿಂದ 84 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಭೂಕಂಪನದ ಬೆನ್ನಲ್ಲೇ ಸಾಗರದಲ್ಲಿ ದೊಡ್ಡದೊಡ್ಡ ಅಲೆಗಳು ಎದ್ದಿವೆ. ಹೀಗಾಗಿ ಸುನಾಮಿ ಏಳಬಹುದಾದ ಎಚ್ಚರಿಕೆಯನ್ನು ಇಂಡೋನೇಷ್ಯಾ ಹವಾಮಾನ ಇಲಾಖೆಯೂ ನೀಡಿದೆ.
ಭೂಕಂಪದ ಹೊಡೆತಕ್ಕೆ ಸುಮಾತ್ರಾ ದ್ವೀಪ ಮತ್ತು ಸಮೀಪದ ಇತರ ಪ್ರದೇಶಗಳು ನಲುಗಿವೆ. ಸ್ಥಳೀಯರು ಸಾಗರ ಪ್ರದೇಶದಿಂದ ದೂರವೇ ಇರಿ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನೊಂದೆಡೆ ಭೂಕಂಪ ಪ್ರದೇಶದಲ್ಲಿ ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಹಾಗೇ ಸುತ್ತಮುತ್ತಲೂ ಎಲ್ಲೆಲ್ಲಿ ಹಾನಿಯಾಗಿದೆ? ಸಾವುನೋವಾಗಿದೆಯಾ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಸ್ಥಳೀಯ ಸುಮಾತ್ರಾ ಸಮುದ್ರತೀರ ವಿಭಾಗದ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.
ಪಶ್ಚಿಮ ಸುಮಾತ್ರಾದ ರಾಜಧಾನಿ ಪಡಾಂಗ್ನಲ್ಲಿ ಭೂಕಂಪದ ತೀವ್ರತೆ ಜಾಸ್ತಿಯಿತ್ತು. ಇಲ್ಲಿ ಭೂಮಿ ನಡುಗುತ್ತಿದ್ದಂತೆ ಬೀಚ್ನಲ್ಲಿ ಅದಾಗಲೇ ಮೀನುಗಾರಿಕಾ ಕೆಲಸಕ್ಕೆಂದು ಸೇರಿದ್ದ ಜನರೆಲ್ಲ ಓಡಲು ಶುರು ಮಾಡಿದರು. ಮನೆಯೊಳಗೆ ಇದ್ದವರೂ ತಮ್ಮತಮ್ಮ ಮನೆಬಿಟ್ಟು ಹೊರಗೆ ಓಡಿ ಬಂದರು. ಒಮ್ಮೆಲೇ ಗಾಬರಿಗೊಂಡಿದ್ದಾರೆ. ಸಮುದ್ರಕ್ಕೆ ತೀರ ಹತ್ತಿರದಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದವರನ್ನು, ಅಲ್ಲಿಂದ ಸ್ಥಳಾಂತರ ಮಾಡಿದ್ದೇವೆ ಎಂದೂ ಅಬ್ದುಲ್ ತಿಳಿಸಿದ್ದಾರೆ.
ಇದನ್ನೂ ಓದಿ: Earthquake: ಹೊಸಪೇಟೆ ಸಮೀಪ ಲಘು ಭೂಕಂಪನ; ಆತಂಕಗೊಂಡ ಸ್ಥಳೀಯರು