ಕೆನಡಾ: ವಾಹನಗಳಿಲ್ಲದೆ ಮನುಷ್ಯನ ಜೀವನವಿಲ್ಲ. ಈಗಂತೂ ಮನೆಗೆ ಒಂದು, ಎರಡು ಅಥವಾ ಮೂರು ವಾಹನಗಳಿರುವುದು ಕೂಡ ಸಾಮಾನ್ಯವೆನಿಸಿಕೊಂಡುಬಿಟ್ಟಿದೆ. ಹೀಗಿರುವಾಗ ವಾಯು ಮಾಲಿನ್ಯವೂ (Air Pollution) ಹೆಚ್ಚಾಗಿಯೇ ಆಗುತ್ತದೆ. ಈ ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ನಿಂದ ಮನುಷ್ಯನ ಮೆದುಳಿನ ಕಾರ್ಯಚಟುವಟಿಕೆಯೇ ದುರ್ಬಲಗೊಳ್ಳುತ್ತದೆ ಎನ್ನುವ ಅಂಶ ವರದಿಯೊಂದರಿಂದ ಹೊರಬಿದ್ದಿದೆ.
ಇದನ್ನೂ ಓದಿ: 10 Most polluted cities | ಟಾಪ್ 10 ಮಾಲಿನ್ಯಭರಿತ ನಗರಗಳಲ್ಲಿ ದಿಲ್ಲಿ ನಂ.1, ಪಟ್ಟಿಯಲ್ಲಿ ಇಲ್ಲ ಬೆಂಗಳೂರು
ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯ (UBC) ಮತ್ತು ವಿಕ್ಟೋರಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನ ನಡೆಸಿ ಈ ರೀತಿಯ ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯು ಜರ್ನಲ್ ಒಂದರಲ್ಲಿ ಪ್ರಕಟವಾಗಿದೆ. ವಾಹನಗಳಿಂದ ಉಂಟಾಗುವ ಸಾಮಾನ್ಯ ಮಟ್ಟದ ಮಾಲಿನ್ಯವು ಕೂಡ ಮಾನವನ ಮೆದುಳಿನ ಕಾರ್ಯವನ್ನು ಕೆಲವೇ ಗಂಟೆಗಳಲ್ಲಿ ದುರ್ಬಲಗೊಳಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮನುಷ್ಯರು ಡೀಸೆಲ್ ವಾಹನಗಳ ಹೊಗೆಯನ್ನು ಎರಡು ಗಂಟೆಗಳ ಕಾಲ ಸೇವಿಸುವುದರಿಂದ ಮೆದುಳಿನ ಕ್ರಿಯಾತ್ಮಕ ಸಂಪರ್ಕದಲ್ಲಿ ಇಳಿಕೆ ಉಂಟಾಗುತ್ತದೆ. ಈ ಅಂಶವನ್ನು ತಿಳಿಯುವುದಕ್ಕೆಂದು 25 ಯುವಕರನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಯುವಕರನ್ನು ಡೀಸೆಲ್ ವಾಹನಗಳ ಹೊಗೆ ಇರುವ ಸ್ಥಳ ಹಾಗೂ ಶುದ್ಧ ಗಾಳಿ ಇರುವ ಸ್ಥಳದಲ್ಲಿ ಬೇರೆ ಬೇರೆ ಸಮಯದಲ್ಲಿ ಇರಿಸಲಾಗಿತ್ತು. ಅವರನ್ನು ಆ ಸ್ಥಳಗಳಿಗೆ ಕರೆದುಕೊಂಡು ಹೋಗುವುದಕ್ಕೂ ಮೊದಲು ಮತ್ತು ಅಲ್ಲಿಂದ ವಾಪಸು ಕರೆದುಕೊಂಡು ಬಂದ ತಕ್ಷಣ ಅವರ ಮೆದುಳಿನ ಚಟುವಟಿಕೆಯನ್ನು ಕ್ರಿಯಾತ್ಮಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್(ಎಫ್‌ಎಂಆರ್‌ಐ) ಬಳಸಿ ಅಳತೆ ಮಾಡಲಾಗಿದೆ. ಅದರಲ್ಲಿ ಡೀಸೆಲ್ ಹೊಗೆ ಸೇವಿಸಿದಾಗ ಅವರ ಮೆದುಳಿನ ಕಾರ್ಯಚಟುವಟಿಕೆ ಇಳಿಕೆಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ: Pollution Awareness | ಶಾಲೆಯಲ್ಲಿ ಟೀಚರ್ ಆದ ಆರ್‌ಟಿಓ ಅಧಿಕಾರಿಗಳು; ಮಕ್ಕಳಿಗೆ ವಾಯುಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ
ಈ ಅಧ್ಯಯನದಲ್ಲಿ ಭಾಗಿಯಾಗಿದ್ದ ಹಿರಿಯ ಲೇಖಕ, ಯುಬಿಸಿಯ ಪ್ರೊಫೆಸರ್ ಡಾ. ಕ್ರಿಸ್ ಕಾರ್ಲ್‌ಸ್ಟನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, “ಈ ರೀತಿಯ ಅಧ್ಯಯನವು ವಿಶ್ವದಲ್ಲೇ ಮೊದಲನೆಯದು, ವಾಯು ಮಾಲಿನ್ಯವು ಮನುಷ್ಯನ ಮೇಲೆ ಬೀರುವ ದುಷ್ಪರಿಣಾಮಕ್ಕೆ ಇದು ಪುರಾವೆಯಾಗಿದೆ. ದೀರ್ಘಕಾಲ ಡೀಸೆಲ್ ವಾಹನಗಳ ಹೊಗೆ ಸೇವಿಸುವುದರಿಂದ ದೊಡ್ಡ ದೊಡ್ಡ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ” ಎಂದಿದ್ದಾರೆ.