ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಎದೆಭಾಗದಲ್ಲಿ ಆಗಿದ್ದ ಕ್ಯಾನ್ಸರ್ಕಾರಕ ಅಂಗಾಂಶಗಳನ್ನು ಫೆಬ್ರವರಿ ತಿಂಗಳಲ್ಲಿ ತೆಗೆದುಹಾಕಲಾಗಿದೆ. ಇದು ಚರ್ಮದ ಕ್ಯಾನ್ಸರ್ಗೆ ಸಂಬಂಧಪಟ್ಟ ಕಾರ್ಸಿನೋಮಾ ಆಗಿತ್ತು. ಸದ್ಯ ಅವರು ಆರೋಗ್ಯವಾಗಿದ್ದಾರೆ. ಮತ್ತೇನೂ ಚಿಕಿತ್ಸೆಯ ಅಗತ್ಯವಿಲ್ಲ ಎಂದು ವೈಟ್ಹೌಸ್ನ ಫಿಸಿಷಿಯನ್ ಆಗಿರುವ ಕೆವಿನ್ ಒ’ಕಾನರ್ ಮಾಹಿತಿ ನೀಡಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಕಳೆದ ವರ್ಷ ಜುಲೈನಲ್ಲಿ ಈ ಬಗ್ಗೆ ಮಾತನಾಡಿದ್ದರು. 2020ರಲ್ಲಿ ತಾವು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ಚರ್ಮದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದೆ ಎಂಬ ವಿಷಯ ತಿಳಿಸಿದ್ದರು. ಅದೀಗ ಮತ್ತೆ ಮರುಕಳಿಸಿತ್ತು, ಮತ್ತು ಅದಕ್ಕೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.
ಜೋ ಬೈಡೆನ್ ಅವರಿಗೆ 80 ವರ್ಷ. ಅವರ ಆರೋಗ್ಯದ ಬಗ್ಗೆ ಆಗಾಗ ಪ್ರಶ್ನೆ ಏಳುತ್ತದೆ. ಇತ್ತೀಚೆಗೆ ಉಕ್ರೇನ್ ಮತ್ತು ಪೋಲ್ಯಾಂಡ್ಗೆ ಭೇಟಿ ಕೊಟ್ಟು, ಪೋಲ್ಯಾಂಡ್ನಿಂದ ಹೊರಡುವಾಗ ಏರ್ಫೋರ್ಸ್ ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ್ದರು. ಅದಕ್ಕೂ ಮೊದಲು 2022ರ ಮಾರ್ಚ್ ತಿಂಗಳಲ್ಲಿ ಕೂಡ ಹೀಗೆ ವಿಮಾನ ಹತ್ತುವಾಗ ಮೂರು ಬಾರಿ ಮುಗ್ಗರಿಸಿ, ಬಿದ್ದು ನಂತರ ಸಾವರಿಸಿಕೊಂಡಿದ್ದರು.
ಫೆಬ್ರವರಿ ತಿಂಗಳಲ್ಲಿ ಬೈಡೆನ್ ಎದೆಯಿಂದ ಈ ಅಂಗಾಂಶವನ್ನು ತೆಗೆಯಲಾಗಿದ್ದು, ಬಳಿಕ ಸಂಪೂರ್ಣವಾಗಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಬೈಡೆನ್ ತಮ್ಮ ಕರ್ತವ್ಯವನ್ನು ಮುಂದುವರಿಸಬಹುದು. ಎದೆಯಿಂದ ತೆಗೆಯಲಾದ ಅಂಗಾಂಶವನ್ನು ಬಯಾಪ್ಸಿಗೆ ಕಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದರು. ಅದರ ರಿಪೋರ್ಟ್ನಲ್ಲಿ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಅದೇನೂ ಪಸರಿಸುವಂಥದ್ದಲ್ಲ ಎಂದೂ ತಿಳಿಸಲಾಗಿದೆ.