Site icon Vistara News

ಚೀನಾದ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಜನಾಂಗೀಯ ಚಿತ್ರ!

china text book

ಶಾಂಘೈ: ನಮ್ಮ ದೇಶದಲ್ಲಿ ಆಗಾಗ ಪಠ್ಯಪುಸ್ತಕ ವಿವಾದಗಳು ಹೊಸತಲ್ಲ. ಆದರೆ ಈಗ ಚೀನಾದಲ್ಲೂ ಇಂಥ ವಿವಾದ ಉದ್ಭವಿಸಿದೆ. ಪಠ್ಯಪುಸ್ತಕಗಳಲ್ಲಿನ ಅಶ್ಲೀಲ ಚಿತ್ರಗಳು ಮತ್ತು ಆಕ್ಷೇಪಾರ್ಹ ಜನಾಂಗೀಯ ವಿಚಾರಗಳು ಇದೀಗ ವಿವಾದದ ಕಿಡಿ ಹಾರಿಸಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಚೀನಾದ ಶಿಕ್ಷಣ ಸಚಿವಾಲಯವು ತನ್ನ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಲ್ಲಿನ ಚಿತ್ರಗಳನ್ನು ಬದಲಾಯಿಸಲು ಪ್ರಕಾಶಕರಿಗೆ ಆದೇಶಿಸಿದೆ. ಪೀಪಲ್ಸ್ ಎಜುಕೇಶನ್ ಪ್ರೆಸ್ ಪ್ರಕಾಶಕರಿಗೆ ಪ್ರಕಟಣೆಗಳನ್ನು ‘ಸರಿಪಡಿಸಲು ಮತ್ತು ಸುಧಾರಿಸಲು’ ಸೂಚಿಸಿದೆ. ಪ್ರಸಕ್ತ ಋತುವಿನ ಸೆಮಿಸ್ಟರ್‌ ಮುಗಿಯುವವರೆಗೆ ಈ ತಿದ್ದುಪಡಿಗೆ ಕಾಲಾವಕಾಶ ನೀಡಿದೆ. ಅಷ್ಟರೊಳಗೆ ಪಠ್ಯದ ಪರಿಷ್ಕರಣೆಯಾಗಬೇಕು ಮತ್ತು ಅದನ್ನು ಸಚಿವಾಲಯವು ಪರಿಶೀಲಿಸಿ ಅನುಮೋದಿಸಬೇಕಾಗಿದೆ.

ವರ್ಣಭೇದ ನೀತಿಯ ಪಳೆಯುಳಿಕೆ

ಪಠ್ಯಪುಸ್ತಕದಲ್ಲಿ ಬಳಸಲಾದ ಕೆಲವು ಚಿತ್ರಗಳು ವರ್ಣಭೇದ ನೀತಿಯ ಪಳೆಯುಳಿಕೆಗಳಾಗಿವೆ ಎಂದು ಚೀನಾದ ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಈ ಚಿತ್ರಗಳಲ್ಲಿ ಚೀನೀಯರನ್ನು ಸಣ್ಣ ಕಣ್ಣುಗಳು, ಅಗಲವಾದ ಮುಖಗಳನ್ನು ಹೊಂದಿರುವ ಬಫೂನ್‌ಗಳಂತೆ ಚಿತ್ರಿಸಲಾಗಿದೆ. ಕೆಲವು ಚಿತ್ರಗಳಲ್ಲಿ, ಹುಡುಗರು ತಮ್ಮ ಪ್ಯಾಂಟ್‌ಗಳ ಮೇಲೆ ಪುರುಷ ಜನನಾಂಗದ ಬಾಹ್ಯರೇಖೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಳಕೆದಾರರು ಚೀನಾದ ಟ್ವಿಟರ್ ತರಹದ ಸಾಮಾಜಿಕ ಮಾಧ್ಯಮ ವೈಬೊದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವಾರದಿಂದ ವೈಬೋ ಸಾಮಾಜಿಕ- ಮಾಧ್ಯಮದಲ್ಲಿ ಇದು ಟಾಪ್ ಟ್ರೆಂಡಿಂಗ್ ಐಟಂಗಳಲ್ಲಿ ಒಂದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಈ ವಿವಾದಕ್ಕೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್ ಅನ್ನು ಹಲವಾರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಅವುಗಳ ಮೇಲೆ ಕಾಮೆಂಟ್ ಮಾಡಲಾಗಿದೆ. ಕಳೆದ ಶುಕ್ರವಾರದವರೆಗೆ, ಈ ವಿಷಯದ ಹ್ಯಾಶ್‌ಟ್ಯಾಗ್ ಅನ್ನು 2.2 ಬಿಲಿಯನ್ ಬಾರಿ ವೀಕ್ಷಿಸಲಾಗಿದೆ.

“ದೇಶದ್ರೋಹಿಗಳು ಎಲ್ಲೋ ಅಡಗಿಕೊಂಡಿದ್ದಾರೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯೊಳಗೆ ಹೊಕ್ಕಿರುವ ಈ ವೈರಸ್‌ಗಳು ಯುಎಸ್ ಪರ ಅಂಶಗಳನ್ನು ಪಠ್ಯದಲ್ಲಿ ತುರುಕಿವೆ” ಎಂದು ವೈಬೋ-ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಮೆರಿಕದ ಧ್ವಜವನ್ನು ಹೋಲುವ ನಕ್ಷತ್ರಗಳು ಮತ್ತು ಬಣ್ಣದ ಪಟ್ಟೆಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಿರುವ ಮಕ್ಕಳನ್ನು ಚಿತ್ರಿಸಲಾಗಿದೆ, ಹೀಗಾಗಿ ಪಠ್ಯದಲ್ಲಿನ ಈ ದೋಷಗಳು ಅಮೆರಿಕದ ಪರವಾಗಿರುವ ಶಕ್ತಿಗಳಿಂದಲೇ ಉಂಟಾಗಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಲು ಕಾರಣವಾಯಿತು.

ಚೀನಿ ಸಂಸ್ಕೃತಿಗೆ ಧಕ್ಕೆ

ಪೀಪಲ್ಸ್ ಎಜುಕೇಶನ್ ಪ್ರೆಸ್ ಪ್ರಕಾಶಕರಿಗೆ ‘ಸರಿಯಾದ ರಾಜಕೀಯ ಮಾರ್ಗಸೂಚಿ ಮತ್ತು ಮೌಲಿಕ ದೃಷ್ಟಿಕೋನವನ್ನು ಅನುಸರಿಸುವಂತೆ, ಅತ್ಯುತ್ತಮವಾದ ಚೀನೀ ಸಂಸ್ಕೃತಿಯನ್ನು ಉತ್ತೇಜಿಸುವಂತೆ ಹಾಗೂ ಪಠ್ಯದ ಪರಿಷ್ಕರಣೆಯಲ್ಲಿ ಸಾರ್ವಜನಿಕರ ಅಭಿರುಚಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು’ ಆದೇಶಿಸಿದೆ.

“ಈ ಪಠ್ಯಪುಸ್ತಕಗಳಲ್ಲಿನ ಎಲ್ಲಾ ಚಿತ್ರಗಳನ್ನು ಬದಲಿಸಲು ಗುಣಮಟ್ಟದ ವಿನ್ಯಾಸಕರನ್ನು ಆಯ್ಕೆ ಮಾಡಲು ವಿಶೇಷ ಕಾರ್ಯಕಾರಿ ಗುಂಪನ್ನು ರಚಿಸಲಾಗಿದೆ. ಇತರ ಬೋಧನಾ ಸಾಮಗ್ರಿಗಳ ಸಂಪೂರ್ಣ ಪರಿಶೀಲನೆಯನ್ನು ಪ್ರಾರಂಭಿಸಲು ಮತ್ತು ಪೋಷಕರ ಮತ್ತು ಶಿಕ್ಷಕರ ಸಲಹೆಯನ್ನು ಆಲಿಸುವುದಾಗಿ” ಪ್ರಕಾಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಣಿತದ ಪಠ್ಯಪುಸ್ತಕಗಳನ್ನು ‘ಜನಾಂಗೀಯ’ ಎಂದು ಕರೆಯಲ್ಪಡುವ ಚಿತ್ರಗಳೊಂದಿಗೆ ಪ್ರಕಟಿಸಿದ್ದಕ್ಕಾಗಿ ಅವರು ‘ಆಳವಾದ ಅಪರಾಧಿ ಭಾವನೆ’ ಅನುಭವಿಸುತ್ತಿರುವುದಾಗಿ ಪ್ರಕಾಶಕರು ಹೇಳಿಕೊಂಡಿದ್ದಾರೆ.

“ನಾವು ಎಲ್ಲಾ ವರ್ಗಗಳ ಉತ್ತಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನಮ್ರತೆಯಿಂದ ಅಳವಡಿಸಿಕೊಂಡಿದ್ದೇವೆ” ಎಂದು ಪೀಪಲ್ಸ್ ಎಜುಕೇಶನ್ ಪ್ರೆಸ್ ಹೇಳಿದೆ.

ಇದನ್ನೂ ಓದಿ | children story: ಮಕ್ಕಳಿಗೆ ಅಬ್ದುಲ್‌ ಕಲಾಂ ಹೇಳಿದ ಎರಡು ಕತೆಗಳು

Exit mobile version