ಕೆನಡಾದಲ್ಲಿ ಹಿಂದು ದೇವಾಲಯಗಳನ್ನು ವಿರೂಪಗೊಳಿಸುವ ಕೃತ್ಯ ಸತತವಾಗಿ ನಡೆದುಕೊಂಡೇ ಬರುತ್ತಿದೆ. ಅಲ್ಲಿನ ಖಲಿಸ್ತಾನಿಗಳು ಇದನ್ನೊಂದು ಚಟವನ್ನಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಕೆನಡಾದ ಬ್ರಾಂಪ್ಟನ್ನಲ್ಲಿರುವ ಗೌರಿ ಶಂಕರ ಮಂದಿರದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕಿಡಿಗೇಡಿಗಳು ಬರೆದಿದ್ದರು. ಈಗ ಮತ್ತೊಂದು ಅಂಥದ್ದೇ ಕೃತ್ಯ ಬೆಳಕಿಗೆ ಬಂದಿದೆ. ಕೆನಡಾದ ಮಿಸಿಸೌಗಾದಲ್ಲಿರುವ ರಾಮಮಂದಿರದ (Ram Mandir In Canada) ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚುವ ಮೂಲಕ ವಿರೂಪಗೊಳಿಸಲಾಗಿದೆ.
ಕೆನಡಾದ ಟೊರಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪದೇಪದೆ ಇಂಥ ಕೃತ್ಯವನ್ನು ಎಸಗಲಾಗುತ್ತಿದೆ. ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಮಮಂದಿರದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಲಾಗಿದೆ. ಇದು ನಿಜಕ್ಕೂ ನಮಗೆ ನೋವುಂಟು ಮಾಡಿದೆ. ದುಷ್ಕರ್ಮಿಗಳ ವಿರುದ್ಧ ಎಷ್ಟಾಗತ್ತೋ ಅಷ್ಟು ಬೇಗ, ಕಠಿಣ ಕ್ರಮ ಕೈಗೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ.
ಏನಿದೆ ಬರಹ?
ಕೆನಡಾದ ರಾಮಮಂದಿರದ ಗೋಡೆ ಮೇಲೆ ‘ಮೋದಿಯನ್ನು ಭಯೋತ್ಪಾದಕ ಎಂದು ಘೋಷಿಸಿ (ಬಿಬಿಸಿ)’, ಹಿಂದುಸ್ತಾನ್ ಮುರಾದಾಬಾದ್, ‘ಸಂತ ಬಿಂದ್ರಾವಾಲಾ ಹುತಾತ್ಮ ಯೋಧ’ ಎಂದು ಬರೆಯಲಾಗಿದೆ. ಇಲ್ಲಿ ಬಿಬಿಸಿ ಪ್ರಧಾನಿ ಮೋದಿಯವರ ಬಗ್ಗೆ ನಿರ್ಮಿಸಿದ ಡಾಕ್ಯುಮೆಂಟರಿಯನ್ನು ದುಷ್ಕರ್ಮಿಗಳು ಉಲ್ಲೇಖಿಸಿದ್ದಾರೆ. ಹಾಗೇ, ಸಿಖ್ ಉಗ್ರ ಸಂಘಟನೆ ದಮ್ದಾಮಿ ತಕ್ಸಲ್ ನಾಯಕ ಬಿಂದ್ರಾವಾಲ ಹುತಾತ್ಮ ವೀರ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್ ಫಾರ್ ಜಸ್ಟೀಸ್ ಸಂಘಟನೆ ಸಿಬ್ಬಂದಿಯ ಕೃತ್ಯವೇ ಇರಬಹುದು ಎಂದೂ ಅಂದಾಜಿಸಲಾಗಿದೆ. ಹಾಗೇ, ‘ಕೆನಡಾದಲ್ಲಿ ಧಾರ್ಮಿಕ ಹಕ್ಕು ಎಲ್ಲರಿಗೂ ಇದೆ. ಇಂಥ ಗೀಚು ಬರಹದ ವಿರುದ್ಧ ಕ್ರಮ ವಹಿಸುತ್ತೇವೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.