ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್‌ನ (South Philippines) ಚಿನ್ನದ ಗಣಿಯಲ್ಲಿ (Gold mine) ಭಾರಿ ಭೂಕುಸಿತ (Landslide) ಸಂಭವಿಸಿದ್ದು, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 54ಕ್ಕೆ ಏರಿದೆ ಎಂದು ಅಲ್ಲಿನ ಸರ್ಕಾರ ಭಾನುವಾರ ತಿಳಿಸಿದೆ. ರಕ್ಷಣಾ ಕಾರ್ಯಕರ್ತರು ಮಣ್ಣಿನಡಿಯಿಂದ ಹೆಚ್ಚಿನ ದೇಹಗಳನ್ನು ತೆಗೆದಿದ್ದಾರೆ.
ದಕ್ಷಿಣ ಫಿಲಿಪ್ಪೀನ್ಸ್‌ನ ದವಾವೊ ಡಿ ಓರೊ ಪ್ರಾಂತ್ಯದ ಮಾಕೊ ಪಟ್ಟಣದ ಚಿನ್ನದ ಗಣಿ ಬಳಿ ಸೋಮವಾರ ರಾತ್ರಿ ಭೂಕುಸಿತ ಸಂಭವಿಸಿದೆ. ಅಪೆಕ್ಸ್ ಮೈನಿಂಗ್ ಕಂಪನಿಯ ಕೆಲಸಗಾರರು, ಕೆಲವು ಮನೆಗಳು ಹಾಗೂ ವಾಹನಗಳು ಸಮಾಧಿಯಾಗಿದೆ.
ಭೂಕುಸಿತದಲ್ಲಿ 54 ಜನರು ಸಾವನ್ನಪ್ಪಿದ್ದಾರೆ ಎಂದು ದಾವೊ ಡಿ ಓರೊ ಸ್ಥಳೀಯ ಸರ್ಕಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. ರಕ್ಷಣಾ ಕಾರ್ಯಕರ್ತರು ಹೆಚ್ಚಿನ ಶವಗಳನ್ನು ಹೊರಗೆ ತೆಗೆದಿದ್ದಾರೆ. ನಾಪತ್ತೆಯಾದವರ ಸಂಖ್ಯೆ 63 ಆಗಿದೆ. ಈ ಸಂಖ್ಯೆಯ ಬಗ್ಗೆ ಇನ್ನೂ ಖಚಿತತೆ ಇಲ್ಲ ಸರ್ಕಾರ ಹೇಳಿದೆ. ಭೂಕುಸಿತದಲ್ಲಿ ಒಟ್ಟು 32 ಮಂದಿ ಗಾಯಗೊಂಡಿದ್ದಾರೆ.
300ಕ್ಕೂ ಹೆಚ್ಚು ಜನರು ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಭಾರೀ ಮಳೆ, ದಟ್ಟವಾದ ಕೆಸರು ಮತ್ತು ಮತ್ತಷ್ಟು ಭೂಕುಸಿತದ ಆತಂಕದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ದಾವೊ ಡಿ ಓರೊದ ಅಧಿಕಾರಿ ಎಡ್ವರ್ಡ್ ಮಕಾಪಿಲಿ ಹೇಳಿದ್ದಾರೆ. ಒಳಗೆ ಸಮಾಧಿಯಾದವರು ಇನ್ನೂ ಬದುಕುಳಿದಿರಬಹುದೇ ಎಂಬ ಪ್ರಶ್ನೆಗೆ, ಅದು ಅಸಂಭವ ಎಂದು ಮಕಾಪಿಲಿ ಹೇಳಿದ್ದಾರೆ. ಆದರೆ ಹುಡುಕಾಟ ಮುಂದುವರಿದಿದೆ. “ತುಂಬಾ ಕಷ್ಟಕರವಾಗಿದ್ದರೂ ಸಹ ರಕ್ಷಣಾ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಮಕಾಪಿಲಿ ಹೇಳಿದರು.
ಇತ್ತೀಚಿನ ವಾರಗಳಲ್ಲಿ ಧಾರಾಕಾರ ಮಳೆಯು ದಾವೊ ಡಿ ಓರೊವನ್ನು ಜರ್ಝರಿತಗೊಳಿಸಿದೆ. ಇದು ಪ್ರವಾಹಗಳು ಮತ್ತು ಭೂಕುಸಿತಗಳನ್ನು ಉಂಟುಮಾಡಿದೆ.
ಇದನ್ನೂ ಓದಿ: Indian Diplomacy: ಕತಾರ್‌ನಲ್ಲಿ ಮರಣದಂಡನೆಗೊಳಗಾಗಿದ್ದ 8 ನೌಕಾಯೋಧರ ಬಿಡುಗಡೆ, ಭಾರತ ತಲುಪಿದ 7 ಯೋಧರು