Site icon Vistara News

ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್​ ನ್ಯಾನ್ಸಿ ಪೆಲೋಸಿ ಪತಿ ಮೇಲೆ ಸುತ್ತಿಗೆಯಿಂದ ಹಲ್ಲೆ; ನ್ಯಾನ್ಸಿ ಎಲ್ಲಿ ಎಂದು ಕೂಗುತ್ತಲೇ ಬಂದಿದ್ದ ದುಷ್ಕರ್ಮಿ !

Nancy Pelosi

ವಾಷಿಂಗ್ಟನ್​: ಯುಎಸ್ ಜನಪ್ರತಿನಿಧಿ ಸಭೆಯ​ ಸ್ಪೀಕರ್ (ಅಮೆರಿಕ ಹೌಸ್ ಸ್ಪೀಕರ್​)​​ ನ್ಯಾನ್ಸಿ ಪೆಲೋಸಿ ಅವರ ಕ್ಯಾಲಿಫೋರ್ನಿಯಾದಲ್ಲಿರುವ ನಿವಾಸಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ನ್ಯಾನ್ಸಿ ಪತಿ ಪೌಲ್​ ಪೆಲೋಸಿ ಮೇಲೆ ಸುತ್ತಿಗೆಯಿಂದ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ್ದಾನೆ. ಶುಕ್ರವಾರ ಮುಂಜಾನೆಯೇ ಮನೆಗೆ ನುಗ್ಗಿದ್ದ ಆತ, ‘ನ್ಯಾನ್ಸಿ ಎಲ್ಲಿ’ ಎಂದು ಒಂದೇ ಸಮನೆ ಕೂಗುತ್ತ, ಪ್ರಶ್ನೆ ಮಾಡುತ್ತಿದ್ದ. ಹೀಗೆ ಹಲ್ಲೆ ಮಾಡಿದವನ ಹೆಸರು ಡೆವಿಡ್​ ಡಿಪೇಪ್ ಎಂದಾಗಿದ್ದು, ಆತನಿಗೆ 42 ವರ್ಷ. ಪೊಲೀಸರು ಅವನನ್ನು ಬಂಧಿಸಿದ್ದಾರೆ.

ಸ್ಪೀಕರ್​ ನ್ಯಾನ್ಸಿ ಪೆಲೋಸಿ ಈ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ, ವಾಷಿಂಗ್ಟನ್​​ನಲ್ಲಿದ್ದರು. ಪತಿ ಮೇಲೆ ಹಲ್ಲೆಯಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಮರಳಿಬಂದಿದ್ದಾರೆ. ಆಸ್ಪತ್ರೆಗೆ ಭೇಟಿ ಕೊಟ್ಟು, ಚಿಕಿತ್ಸೆ ಪಡೆಯುತ್ತಿರುವ ಪತಿಯ ಯೋಗಕ್ಷೇಮ ವಿಚಾರಸಿದ್ದಾರೆ. ಪೌಲ್​ ಪೆಲೋಸಿಯವರೊಂದಿಗೆ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಇನ್ನು 82 ವರ್ಷದ ಪೌಲ್ ತಲೆಗೆ ಗಂಭೀರ ಗಾಯವಾಗಿದ್ದು ತಲೆಯ ಚಿಪ್ಪು ಫ್ರ್ಯಾಕ್ಚರ್​ ಆಗಿದೆ. ಅಲ್ಲದೆ, ಬಲ ಭಾಗದ ತೋಳು, ಎರಡೂ ಕೈಯಿಗಳಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಪೂರ್ತಿ ಗುಣಮುಖರಾದ ವಿನಃ ಡಿಸ್​ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗೇ, ಇದು ಉದ್ದೇಶಪೂರ್ವಕವಾಗಿಯೇ ನಡೆಸಲಾದ ಹಲ್ಲೆ, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದೂ ಅಲ್ಲಿನ ಪೊಲೀಸ್​ ಹೇಳಿದ್ದಾರೆ.

ಇದನ್ನೂ ಓದಿ: ತೈವಾನ್ ಅಧ್ಯಕ್ಷೆ ಪಕ್ಕ ನಿಂತು ಚೀನಾಕ್ಕೊಂದು ಖಡಕ್​ ಸಂದೇಶ ಕೊಟ್ಟ ನ್ಯಾನ್ಸಿ; ಎಚ್ಚರಿಕೆಗೆ ಡೋಂಟ್​​ ಕೇರ್​ !

Exit mobile version