Site icon Vistara News

Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 91 ಜನ ಸಾವು

Bangladesh

ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ (Bangladesh) ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ದೇಶದ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಭಾನುವಾರ (ಆಗಸ್ಟ್‌ 4) ನಡೆಸಿದ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, 91 ಜನ ಮೃತಪಟ್ಟಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯ ವೇಳೆ ನೂರಾರು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶೇಖ್‌ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದ ರಾಜಧಾನಿ ಢಾಕಾ ಸೇರಿ 13 ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಲಾಗುತ್ತಿದೆ. ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು, ಲಾಠಿ ಚಾರ್ಜ್‌ ಮಾಡಿದ್ದಾರೆ. ಇಷ್ಟಾದರೂ ಪ್ರತಿಭಟನೆಯು ಹಿಂಸಾರೂಪ ತಾಳಿದೆ. ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಸರ್ಕಾರಿ ಆಸ್ತಿ-ಪಾಸ್ತಿ ಧ್ವಂಸ, ಪೊಲೀಸರು ಹಾಗೂ ಯೋಧರ ಮೇಲೆಯೇ ಕಲ್ಲುತೂರಾಟ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆದಿದೆ. ಇನ್ನು, ಪೊಲೀಸರ ಗುಂಡಿಗೆ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಮತ್ತೆ ಪ್ರತಿಭಟನೆ ಏಕೆ?

ಬಾಂಗ್ಲಾದಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ಶೇಖ್‌ ಹಸೀನಾ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶೇಖ್‌ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸಹಾಯವಾಣಿ ತೆರೆದ ಭಾರತ

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಕಾರಣ ಬಾಂಗ್ಲಾದಲ್ಲಿರುವ ರಾಯಭಾರ ಕಚೇರಿಯು ಹೊಸ ಸಹಾಯವಾಣಿ ತೆರೆದಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ಅಲರ್ಟ್‌ ಆಗಿ ಇರಬೇಕು. ಯಾವುದೇ ಸಮಸ್ಯೆಯಾದರೆ +88-01313076402 ಸಂಖ್ಯೆಗೆ ಕರೆ ಮಾಡಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: Infiltration: ಭಾರತಕ್ಕೆ ನುಗ್ಗುವುದು ಹೇಗೆ ಎಂದು ವಿಡಿಯೊ ಮಾಡಿದ ಬಾಂಗ್ಲಾ ವ್ಯಕ್ತಿ; ದೀದಿ ಆಹ್ವಾನದ ಬೆನ್ನಲ್ಲೇ ವಿಡಿಯೊ ವೈರಲ್‌

Exit mobile version