Site icon Vistara News

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Bangladesh Protest

ಬಾಂಗ್ಲಾದೇಶದ ಪ್ರಧಾನಿ (Bangladesh PM) ಶೇಖ್ ಹಸೀನಾ (Sheikh Hasina) ಪ್ರಜಾ ದಂಗೆಗೆ (Bangladesh Chronology) ಹೆದರಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ದೇಶದ ನಾಯಕರು ಈ ರೀತಿ ಪಲಾಯನ ಮಾಡುವುದು ಹೊಸದಲ್ಲ. ಬಾಂಗ್ಲಾ ದೇಶವು ಸ್ವಾತಂತ್ರ್ಯ ಗಳಿಸಿದ ಬಳಿಕ ಇಲ್ಲಿನ ಅನೇಕ ನಾಯಕರನ್ನು ದೇಶ ಬಿಟ್ಟು ಹೋಗುವಂತೆ ಮಾಡಲಾಗಿದೆ. ಹಿಂಸಾತ್ಮಕ ಘಟನೆಗಳಿಂದ (Bangladesh Protest) ಹಲವರು ಅಧಿಕಾರ ಬಿಟ್ಟು ತೆರಳಿದ್ದಾರೆ.

ಬಾಂಗ್ಲಾದೇಶ ಎಂದರೆ ಅದೊಂದು ರಕ್ತಸಿಕ್ತ ಹೋರಾಟದ ಅಧ್ಯಾಯವೇ ಆಗಿದೆ. ಆ ದೇಶದ ಚರಿತ್ರೆಯ ಹಿನ್ನೋಟ ಇಲ್ಲಿದೆ.

1975

1971ರಲ್ಲಿ ಭಾರತವು ಗಡಿಯೊಳಗೆ ನುಗ್ಗಿ ಪಾಕಿಸ್ತಾನದ ಸೇನೆಯನ್ನು ಹೀನಾಯವಾಗಿ ಸೋಲಿಸಿದ ಬಳಿಕ ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಸ್ವತಂತ್ರವಾಯಿತು. 1971ರಲ್ಲಿ ಬಾಂಗ್ಲಾದೇಶ ಹೊಸ ರಾಷ್ಟ್ರವಾಗಿ ನಿರ್ಮಾಣವಾಯಿತು. ಸ್ವಾತಂತ್ರ್ಯ ವೀರ ಶೇಖ್ ಮುಜಿಬುರ್ ರೆಹಮಾನ್ ದೇಶದ ಮೊದಲ ಅಧ್ಯಕ್ಷರಾದರು.

Bangladesh Protest


1975ರ ಜನವರಿಯಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ವರ್ಷದೊಳಗೆ ಅವರನ್ನು ಅಂದರೆ ಆಗಸ್ಟ್ 15ರಂದು ಅವರ ಪತ್ನಿ ಮತ್ತು ಮೂವರು ಪುತ್ರರೊಂದಿಗೆ ಸೈನಿಕರ ಗುಂಪು ಭೀಕರವಾಗಿ ಹತ್ಯೆ ಮಾಡಿತು. ಇದು ದೇಶದಲ್ಲಿ ಸುಧೀರ್ಘ ಕಾಲದ ಮಿಲಿಟರಿ ಆಡಳಿತವನ್ನು ತಂದಿತು. ಬಳಿಕ ಸೇನೆಯ ಬೆಂಬಲದೊಂದಿಗೆ ಖೊಂಡಕರ್ ಮೊಸ್ತಾಕ್ ಅಹ್ಮದ್ ಅಧಿಕಾರ ವಹಿಸಿಕೊಂಡರು.

ಅಹ್ಮದ್ ಅವರ ಅಧಿಕಾರಾವಧಿಯು ಅಲ್ಪಕಾಲವಾಗಿತ್ತು. ನವೆಂಬರ್ 3ರಂದು ಅವರ ಪ್ರತಿಸ್ಪರ್ಧಿ ಸೈನ್ಯದ ಮುಖ್ಯಸ್ಥ ಖಲೀದ್ ಮೊಶರಫ್ ಅವರಿಂದ ಪದಚ್ಯುತರಾದರು. ಆದರೆ ದಂಗೆಕೋರರಿಂದ ಮೊಷರಫ್‌ ಕೂಡ ಹತ್ಯೆಗೀಡಾದರು. ಬಳಿಕ ಸಾಕಷ್ಟು ದಂಗೆ, ಪ್ರತಿ ದಂಗೆಗಳು ನಡೆದವು. ಅಂತಿಮವಾಗಿ ಜನರಲ್ ಜಿಯಾವುರ್ ರೆಹಮಾನ್ ಅಧಿಕಾರವನ್ನು ವಹಿಸಿಕೊಂಡರು.

1981-83

ಆರು ವರ್ಷಗಳ ಅಧಿಕಾರದ ಅನಂತರ 1981ರ ಮೇ 30ರಂದು ಜಿಯಾವುರ್ ರೆಹಮಾನ್ ಅವರು ವಾಸಿಸುತ್ತಿದ್ದ ಚಿತ್ತಗಾಂಗ್ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ನುಗ್ಗಿದ ಬಂಡುಕೋರರು ಅವರನ್ನು ಹತ್ಯೆ ಮಾಡಿದರು. ಈ ಹಿಂಸಾಚಾರವು ಸೈನ್ಯದ ಅಧಿಕಾರಿಗಳ ಸಣ್ಣ ಗುಂಪಿನ ಕೃತ್ಯವೆಂದು ಹೇಳಲಾಗಿತ್ತು. ರೆಹಮಾನ್ ಅವರ ಉಪಾಧ್ಯಕ್ಷರಾದ ಅಬ್ದುಸ್ ಸತ್ತಾರ್ ಅವರು ಜನರಲ್ ಹುಸೇನ್ ಮುಹಮ್ಮದ್ ಇರ್ಷಾದ್ ಅವರ ಬೆಂಬಲದೊಂದಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಇರ್ಷಾದ್ ಒಂದು ವರ್ಷದೊಳಗೆ ಸತ್ತಾರ್ ವಿರುದ್ಧ ತಿರುಗಿಬಿದ್ದರು. 1982ರ ಮಾರ್ಚ್ 24ರಂದು ನಡೆದ ದಂಗೆಯಲ್ಲಿ ಸತ್ತಾರ್ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು. ಬಳಿಕ ಅವರು ಮುಖ್ಯ ಸಮರ-ಕಾನೂನು ನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡರು. ಅನಂತರ ಅಹ್ಸಾನುದ್ದೀನ್ ಚೌಧರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.

1983ರ ಡಿಸೆಂಬರ್ 11ರಂದು, ಇರ್ಷಾದ್ ಸ್ವತಃ ರಾಷ್ಟ್ರದ ಮುಖ್ಯಸ್ಥ ಎಂದು ಘೋಷಿಸಿಕೊಂಡರು. ಗೌರವಾನ್ವಿತ ಸ್ಥಾನವನ್ನು ಹೊಂದಿದ್ದ ಚೌಧರಿ ಅವರು ರಾಜಕೀಯ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರು.


1990

ಬಾಂಗ್ಲಾದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಕರೆ ನೀಡುವ ಪ್ರತಿಭಟನೆ ಆರಂಭ ತೀವ್ರಗೊಂಡ ಬಳಿಕ ಇರ್ಷಾದ್ 1990ರ ಡಿಸೆಂಬರ್ 6ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅನಂತರ ಅವರನ್ನು ಬಂಧಿಸಿ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹಾಕಲಾಯಿತು. ನ್ಯಾಯಾಂಗ ಸಚಿವ ಶಹಾಬುದ್ದೀನ್ ಅಹ್ಮದ್ ಅವರು ಮುಂದಿನ ವರ್ಷ ಚುನಾವಣೆ ನಡೆಯುವವರೆಗೆ ಹಂಗಾಮಿ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇರ್ಷಾದ್ ಜನವರಿ 1997ರಲ್ಲಿ ಜೈಲಿನಿಂದ ಬಿಡುಗಡೆಯಾದರು.


1991

ದೇಶದ ಮೊದಲ ಚುನಾವಣೆಗಳು 1991ರ ಆರಂಭದಲ್ಲಿ ನಡೆದವು. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಸ್ಪಷ್ಟ ಬಹುಮತ ಗಳಿಸಿತ್ತು. ಜನರಲ್ ಜಿಯಾವುರ್ ರೆಹಮಾನ್ ಅವರ ಪತ್ನಿ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು.

1996

ಈ ಚುನಾವಣೆಯಲ್ಲಿ ಅವಾಮಿ ಲೀಗ್ ಬಿಎನ್‌ಪಿಯನ್ನು ಸೋಲಿಸಿದ ಬಳಿಕ ದೇಶದ ಸಂಸ್ಥಾಪಕ ಮುಜಿಬುರ್ ರೆಹಮಾನ್ ಅವರ ಮಗಳು ಶೇಖ್ ಹಸೀನಾ ಅವರು ಖಲೀದಾ ಜಿಯಾ ಅವರ ಉತ್ತರಾಧಿಕಾರಿಯಾದರು.

2001

ಈ ಚುನಾವಣೆಯಲ್ಲಿ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಮರಳಿತು. ಜಿಯಾ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾದರು. ಅಕ್ಟೋಬರ್ 2006ರಲ್ಲಿ ಅವರ ಅಧಿಕಾರದ ಅವಧಿ ಪೂರ್ಣಗೊಂಡಿತು.

2007

ಸೇನಾ ಮುಖ್ಯಸ್ಥರು ಮಿಲಿಟರಿ ದಂಗೆಯನ್ನು ನಡೆಸಿದರು. ಅಧ್ಯಕ್ಷ ಇಯಾಜುದ್ದೀನ್ ಅಹ್ಮದ್ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಹಸೀನಾ ಮತ್ತು ಜಿಯಾ ಇಬ್ಬರನ್ನೂ ಬಂಧಿಸಲಾಯಿತು. 2009ರಲ್ಲಿ ಹಸೀನಾ ಅಧಿಕಾರಕ್ಕೆ ಬರುವವರೆಗೂ ಎರಡು ವರ್ಷಗಳ ಕಾಲ ದೇಶವನ್ನು ಆಳಿದ ಉಸ್ತುವಾರಿ ಸರ್ಕಾರವನ್ನು ಅಹ್ಮದ್ ಬೆಂಬಲಿಸಿದರು.

2008

ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣೆ ಗೆದ್ದ ಹಸೀನಾ ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾದರು.

2009

ವೇತನ ಮತ್ತು ಜೀವನ ಪರಿಸ್ಥಿತಿಗಳ ಬಗ್ಗೆ ಅತೃಪ್ತಿಗೊಂಡ ಅರೆಸೈನಿಕ ಪಡೆಗಳು ರಾಜಧಾನಿ ಢಾಕಾದಲ್ಲಿ 70ಕ್ಕೂ ಹೆಚ್ಚು ಜನರನ್ನು ಕೊಂದವು. ಅವರಲ್ಲಿ ಹೆಚ್ಚಿನವರು ಸೇನಾ ಅಧಿಕಾರಿಗಳು. ಸುಮಾರು ಹನ್ನೆರಡು ಪಟ್ಟಣಗಳಿಗೆ ಹರಡಿದ ದಂಗೆಯು ಆರು ದಿನಗಳ ಅನಂತರ ಕೊನೆಗೊಂಡಿತು.

ಇದನ್ನೂ ಓದಿ: Bangladesh Protest: ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಶತ್ರು ಖಲೇದಾ ಜಿಯಾ ರಿಲೀಸ್‌ಗೆ ಆದೇಶ!

2012

ದೇಶಾದ್ಯಂತ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಪರಿಚಯಿಸುವ ಬೃಹತ್‌ ಹೋರಾಟ ಶುರುವಾಯಿತು. ನಿವೃತ್ತ ಮತ್ತು ಸೇವೆಯಲ್ಲಿರುವ ಅಧಿಕಾರಿಗಳಿಂದ ನಡೆದ ಈ ದಂಗೆಯ ಪ್ರಯತ್ನವನ್ನು ಬಾಂಗ್ಲಾದೇಶದ ಸೇನೆ ವಿಫಲಗೊಳಿಸಿತು.

Bangladesh Protest


2024

ಸರ್ಕಾರಿ ಉದ್ಯೋಗದಲ್ಲಿ ಬಾಂಗ್ಲಾ ವಿಮೋಚನೆ ಹೋರಾಟಗಾರರ ಕುಟುಂಬದವರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಪ್ರಾರಂಭವಾದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪ್ರಧಾನಿ ಶೇಕ್‌ ಹಸೀನಾ ರಾಜೀನಾಮೆ ನೀಡಬೇಕಾಯಿತು. ಈ ದಂಗೆಯಲ್ಲಿ 400ಕ್ಕೂ ಹೆಚ್ಚು ಜನ ಸತ್ತರು. ದೇಶವನ್ನು ಮುನ್ನಡೆಸಲು ಮಧ್ಯಂತರ ಸರ್ಕಾರವನ್ನು ರಚಿಸಲು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಈಗ ಮುಂದಾಗಿದ್ದಾರೆ.

Exit mobile version