ಕ್ವೆಟ್ಟಾ, ಪಾಕಿಸ್ತಾನ: ಪೇಶಾವರದಿಂದ ಕ್ವೆಟ್ಟಾದ ಕಡೆಗೆ ಹೊರಟಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು(Pakistan Blast), ಕನಿಷ್ಠ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಮೃತರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಎಆರ್‌ವೈ ನ್ಯೂಸ್ ವರದಿ ಮಾಡಿದೆ.
ರೈಲಿನಲ್ಲಿ ಸ್ಫೋಟ ಸಂಭವಿಸಿರುವುದನ್ನು ಪಾಕಿಸ್ತಾನ ರೈಲ್ವೆ ಖಚಿತಪಡಿಸಿದೆ. ಕ್ವೆಟ್ಟಾದ ಕಡೆಗೆ ಹೊರಟ ಜಾಫರ್ ಟ್ರೈನ್, ಚಿಚಾವತ್ನಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತದ್ದಂತೆ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ರೈಲಿನ ಬೋಗಿ ನಂಬರ್ 4ರಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಪ್ರಯಾಣಿಕರೊಬ್ಬರ ಸಿಲಿಂಡರ್ ಲಗೇಜ್ ಆಗಿ ಅಡಗಿಸಿಟ್ಟುಕೊಂಡಿದ್ದರು ಮತ್ತು ಅದನ್ನು ಬಾತ್‌ರೂಮ್ ಕಡೆಗೆ ಒಯ್ಯುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂಬ ಪಾಕಿಸ್ತಾನ ರೈಲ್ವೆ ಇಲಾಖೆಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ಇದನ್ನೂ ಓದಿ: Peshawar Blast: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, 61 ಜನರ ಸಾವು, 150ಕ್ಕೂ ಅಧಿಕ ಮಂದಿಗೆ ಗಾಯ
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಪರಿಹಾರ ಕಾರ್ಯಾಚರಣಾ ತಂಡಗಳು ಮತ್ತು ಪೊಲೀಸರು ಆಗಮಿಸಿದ್ದಾರೆ. ಪರಿಹಾರವನ್ನು ಕೈಗೊಳ್ಳಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.