ಜಪಾನ್ ಪ್ರಧಾನಮಂತ್ರಿ ಫುಮಿಯೊ ಕಿಶಿದಾ (Fumio Kishida) ಅವರು ವಕಾಯಾಮಾ ಬಂದರಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ, ಸ್ಪಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫುಮಿಯೊ ಭಾಷಣ ಮಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದೊಡ್ಡದಾದ ಬಾಂಬ್ ಸ್ಫೋಟ ಕೇಳಿದೆ. ಅಷ್ಟೇ ಅಲ್ಲ, ಪ್ರಧಾನಿಯೆಡೆಗೆ ಒಂದು ಪೈಪ್ (ಕೊಳವೆ)ನಂಥ ವಸ್ತುವನ್ನು ಎಸೆಯಲಾಗಿದೆ. ಅದೃಷ್ಟಕ್ಕೆ ಫುಮಿಯೊ ಕಿಶಿದಾ ಅವರಿಗೆ ಏನೂ ತೊಂದರೆಯಾಗಲಿಲ್ಲ. ಅವರನ್ನು ವಕಾಯಾಮಾ ಬಂದರಿನಿಂದ ಕೂಡಲೇ ಸ್ಥಳಾಂತರ ಮಾಡಲಾಗಿದೆ. ಸಂಪೂರ್ಣ ಭದ್ರತೆ ನೀಡಿ ಅವರನ್ನು ಕರೆದೊಯ್ಯಲಾಗಿದೆ ಎಂದು ಜಪಾನ್ ಮೀಡಿಯಾಗಳು ಹೇಳಿವೆ.
ಇದೊಂದು ಹೊಗೆ ಬಾಂಬ್ ಆಗಿದ್ದು, ದುರುದ್ದೇಶದಿಂದ ಎಸೆಯಲಾಗಿತ್ತು. ಜಪಾನ್ ಪ್ರಧಾನಿ ಸೇರಿ ಯಾರಿಗೂ ಗಾಯವಾಗಲಿಲ್ಲ. ಅದೇ ಸ್ಥಳದಿಂದ ಕೂಡಲೇ ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ಹಾಗಂತ ಈ ಬಗ್ಗೆ ಜಪಾನ್ ಪೊಲೀಸರು ಏನೂ ಹೇಳಿಕೆ ಬಿಡುಗಡೆ ಮಾಡಲಿಲ್ಲ. ಫುಮಿಯೊ ಕಿಶಿದಾ ಭಾಷಣದ ನಿಮಿತ್ತ ಅನೇಕರು ಅಲ್ಲಿ ಸೇರಿದ್ದರು. ಬಾಂಬ್ ಸ್ಪೋಟವಾಗುತ್ತಿದ್ದಂತೆ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ದಿಗಿಲುಗೊಂಡು ಕೂಗಾಡಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
2022ರ ಜುಲೈ 8ರಂದು ಜಪಾನ್ನಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆಯ ಹತ್ಯೆಯಾಗಿತ್ತು. ಜಪಾನ್ ಪಶ್ಚಿಮ ನಗರ ನಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಗುಂಡಿನ ದಾಳಿಗೆ ಒಳಗಾದ ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮಾಜಿ ಯೋಧ ತೆಟ್ಸಾಯ ಯಾಮಗಾಮಿ ಎಂಬಾತ ಹಿಂದಿನಿಂದ ಗುರಿಯಿಟ್ಟು ಗುಂಡು ಹೊಡೆದಿದ್ದ. ಒಂದು ಗುಂಡು ಶಿಂಜೊ ಎದೆಗೆ ಬಿದ್ದಿತ್ತು, ಇನ್ನೊಂದು ಗುಂಡು ಅವರ ಕುತ್ತಿಗೆಗೆ ಬಿದ್ದಿತ್ತು. ಗುಂಡಿನ ದಾಳಿಗೆ ಒಳಗಾಗುತ್ತಿದ್ದಂತೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಅವರಿಗೆ ಪ್ರಾಥಮಿಕವಾಗಿ ಸಿಪಿಆರ್ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆಸ್ಪತ್ರೆಯಲ್ಲಿ ವೈದ್ಯರು ಕೂಡ ಹಲವು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಕೊನೆಗೂ ಅವರು ಬದುಕಲಿಲ್ಲ. ಈಗ ಜಪಾನ್ನ ಈಗಿನ ಪ್ರಧಾನಿಗೂ ಜೀವ ಭಯ ಎದುರಾಗಿದೆ.
ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆಯಲ್ಲಿ ಅಗ್ನಿಪಥ್ ನೆರಳು ಕಂಡ ಟಿಎಂಸಿ!