ಕ್ಯಾಲಿಫೋರ್ನಿಯಾ: ಯುಎಸ್‌ನಲ್ಲಿ ಫೈರಿಂಗ್ ಹೊಸದಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ, ಮಳಿಗೆಗಳಲ್ಲಿ ಆಗಾಗ ಗನ್ಮೆನ್ಗಳು ಶೂಟ್ ಮಾಡಿ, ಅಮಾಯಕರ ಪ್ರಾಣ ತೆಗೆಯುವುದು ಅಮೆರಿಕದಲ್ಲಿ ಪದೇಪದೆ ನಡೆಯುತ್ತಲೇ ಇರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಈಗ ಮತ್ತೊಂದು ಶೂಟೌಟ್ ಆಗಿದೆ. ಆದರೆ ಈ ಸಲ ಆಗಿದ್ದು ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ಒಂದಷ್ಟು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ, ಗುಂಡು ಹಾರಿಸಿದ್ದಾರೆ. ಇವರ ಗುಂಡಿನ ದಾಳಿಗೆ ಆರು ತಿಂಗಳ ಮಗು, ಅದರ ತಾಯಿ ಸೇರಿ ಒಟ್ಟು 6 ಮಂದಿ ಬಲಿಯಾಗಿದ್ದಾರೆ.
ಕ್ಯಾಲಿಫೋರ್ನಿಯಾದ ತುಲಾರೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಬಂದೂಕು ಧಾರಿಗಳು ಒಂದೇ ಸಮ ಗುಂಡು ಹಾರಿಸಿದ್ದಾರೆ. ಅದನ್ನು ನೋಡಿದ ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಹುತೇಕ ಜನರ ಜೀವ ಹೋಗಿತ್ತು. ಈ ಕೇಸ್ಗೆ ಡ್ರಗ್ಸ್ ಲಿಂಕ್ ಇರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ತುಲಾರೆಯ ಪೊಲೀಸ್ ಅಧಿಕಾರಿ ಮೈಕ್ ಬೌಡ್ರೆಕ್ಸ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿ ‘ಸೋಮವಾರ ಮಧ್ಯಾಹ್ನ 3.30ರ ಹೊತ್ತಿಗೆ ಈ ದಾಳಿಯಾಗಿದೆ. ಇಬ್ಬರು ದಾಳಿಕೋರರು ಇರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ನಡೆಸುತ್ತಿದ್ದೇವೆ. ಮೃತಪಟ್ಟ ಮಗು 6ತಿಂಗಳದ್ದಾಗಿದ್ದು, ಅದರ ತಾಯಿಗೆ 17 ವರ್ಷ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುಎಸ್‌ನಲ್ಲಿ ಮತ್ತೊಮ್ಮೆ ಶೂಟೌಟ್; ಮೂವರನ್ನು ಕೊಂದ ಹಂತಕನನ್ನು ಹತ್ಯೆಗೈದ ನಾಗರಿಕ