ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರುವ ಶಿಕ್ಷಣ ಇಲಾಖೆ ಕಚೇರಿ ಸಮೀಪ ಶನಿವಾರ ರಾತ್ರಿ ಕಾರು ಬಾಂಬ್ ದಾಳಿಯಾಗಿದ್ದು, ಅದರಲ್ಲಿ 100 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚುಜನರು ಗಾಯಗೊಂಡಿದ್ದಾರೆ. ಅನೇಕರ ಸ್ಥಿತಿ ಗಂಭೀರವಾಗಿದೆ. ಎರಡು ಕಾರು ಬಾಂಬ್ ಸ್ಫೋಟಗೊಂಡಿದ್ದು, 2017ರಿಂದ ಈಚೆಗೆ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ. 2017ರಲ್ಲಿ ಇದೇ ಸ್ಥಳದಲ್ಲಿ ಭೀಕರ ಟ್ರಕ್ ಬಾಂಬ್ ದಾಳಿಯಾಗಿತ್ತು. ಅದರಲ್ಲಿ ಸುಮಾರು 500 ಮಂದಿ ಮೃತಪಟ್ಟಿದ್ದರು.
ಕಾರು ಬಾಂಬ್ ದಾಳಿ ನಡೆಸಿದ್ದು ಅಲ್ ಶಬಾಬ್ ಉಗ್ರಸಂಘಟನೆಯೇ ಎಂದು ಸೊಮಾಲಿಯಾ ಸರ್ಕಾರ ಪ್ರತಿಪಾದಿಸಿದೆ. ಇದು ಸೊಮಾಲಿಯಾದ ಇಸ್ಲಾಮಿಕ್ ಮೂಲಭೂತವಾದಿಗಳ ಉಗ್ರಸಂಘಟನೆಯಾಗಿದ್ದು, ಪೂರ್ವ ಆಫ್ರಿಕಾದ ಅನೇಕ ಕಡೆಗಳಲ್ಲಿ ಸಕ್ರಿಯವಾಗಿದೆ. ಹಾಗೇ, ಅಲ್-ಕೈದಾ ಉಗ್ರಸಂಘಟನೆಯೊಂದಿಗೆ ಸಂಪರ್ಕವನ್ನೂ ಹೊಂದಿದೆ. ಇದುವರೆಗೆ ಅಲ್ ಶಬಾಬ್ ಸಂಘಟನೆ ದಾಳಿಯ ಹೊಣೆಯನ್ನು ತಾನು ಹೊತ್ತುಕೊಂಡಿಲ್ಲ. ಆದರೆ ಅತ್ಯಂತ ಭೀಕರ ದಾಳಿ ಇದಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ರಕ್ತದ ಹೊಳೆಯೇ ಹರಿದಿದೆ. ಅಲ್ಲಿನ ಮನೆಗಳೆಲ್ಲ ಭಾಗಶಃ ಧ್ವಂಸಗೊಂಡಿವೆ. ಕಿಟಕಿ-ಬಾಗಿಲುಗಳು ಚೂರುಚೂರಾಗಿ ಬಿದ್ದಿವೆ.
ಸೊಮಾಲಿಯಾ ಸರ್ಕಾರ ಅಲ್ ಶಬಾಬ್ ಉಗ್ರರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಹೊಸ ಮಾದರಿಯ ಹೋರಾಟ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಉಗ್ರಸಂಘಟನೆಯೂ ಇನ್ನಷ್ಟು ದಾಳಿಗಳನ್ನು ನಡೆಸುತ್ತಿದೆ. ಈ ಭಯೋತ್ಪಾದಕ ಸಂಘಟನೆ ತಾನು ನಡೆಸಿದ ದಾಳಿಯಲ್ಲಿ ನೂರಾರು ಜನ ಮೃತಪಟ್ಟರೆ, ಆ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ. ಮೌನ ವಹಿಸುತ್ತದೆ. ಅದರಲ್ಲೂ ಇದು ಹೆಚ್ಚಾಗಿ ಸರ್ಕಾರಿ ಕಟ್ಟಡಗಳು, ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಬಾಂಬ್ ದಾಳಿ ನಡೆಸುತ್ತದೆ.
ಇದನ್ನೂ ಓದಿ: Somalia Attack | ಸೊಮಾಲಿಯಾದಲ್ಲಿ ನಡೆದ ಮುಂಬೈ ಮಾದರಿ ಉಗ್ರರ ದಾಳಿ ಅಂತ್ಯ ಎಂದ ಸೇನೆ, ಸಾವಿನ ಸಂಖ್ಯೆ 40ಕ್ಕೆ ಏರಿಕೆ