ಚೀನಾದಲ್ಲಿ ಶೂನ್ಯ ಕೊವಿಡ್ ನೀತಿ ಅಂದರೆ ಕೊವಿಡ್ 19ನ್ನು ಸಂಪೂರ್ಣವಾಗಿ ಕೊನೆಗಾಣಿಸುವ ಸಲುವಾಗಿ ಹೇರಲಾದ ಕಠಿಣ ನಿಯಮಗಳ ವಿರುದ್ಧ ಅಲ್ಲಿನ ಜನರು ತಿರುಗಿಬಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಗಂಭೀರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಗರಿಕರ ನಿರಂತರ ಪ್ರತಿಭಟನೆಗೆ ಮಣಿದ ಅಲ್ಲಿನ ಆಡಳಿತ ಸಂಸ್ಥೆಗಳು ಕೆಲವು ಪ್ರದೇಶಗಳಲ್ಲಿ ಕೊವಿಡ್ 19 ನಿರ್ಬಂಧ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿವೆ.
ಚೀನಾದಲ್ಲಿ ಸೋಮವಾರ 39,452 ಕೊವಿಡ್ ಸೋಂಕಿನ ಪ್ರಕರಣ ಪತ್ತೆಯಾಗಿವೆ. ಕೊರೊನಾ ಶುರುವಾದಾಗಿನಿಂದಲೂ ಚೀನಾದಲ್ಲಿ ಕಠಿಣ ನಿಯಮಗಳನ್ನು ಹೇರಲಾಗಿದೆ. ಕ್ಸಿ ಜಿಯಾಂಗ್ ಸೇರಿ ಹಲವು ಪ್ರಮುಖ ನಗರಗಳಲ್ಲಂತೂ ಜನರು ಮನೆಯಿಂದ ಹೊರಬರುವುದನ್ನೇ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಲವು ತಿಂಗಳುಗಳಿಂದಲೂ ಮನೆಯೊಳಗೇ ಬಂಧಿಯಾಗಿ, ದಿನ ಬಳಕೆಯ ವಸ್ತುಗಳ ಖರೀದಿಗೂ ಪರದಾಟ ಪಡುತ್ತಿರುವ ಚೀನಾ ನಾಗರಿಕರು ಈಗ ಬೀದಿಗೆ ಇಳಿದಿದ್ದಾರೆ. ಅದರಲ್ಲೂ ಕೊವಿಡ್ 19 ಸೋಂಕಿತರು ಇರುವ ಅಪಾರ್ಟ್ಮೆಂಟ್ಗೆ ಬೆಂಕಿ ಬಿದ್ದ ಬಳಿಕ ಪ್ರತಿಭಟನೆ ತೀವ್ರತೆ ಹೆಚ್ಚಿದೆ. ಲಾಕ್‌ಡೌನ್ ತೆರವುಗೊಳಿಸಬೇಕೆಂದು ಆಗ್ರಹಿಸುತ್ತ ಮೆರವಣಿಗೆ ನಡೆಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಚೀನಾ ವಿದೇಶಾಂಗ ವ್ಯವಹಾರಗಳ ಇಲಾಖೆ ಸೋಮವಾರ (ನ.28) ಹೇಳಿಕೆ ಬಿಡುಗಡೆ ಮಾಡಿದ್ದು ‘ಕೊವಿಡ್ 19 ವಿರುದ್ಧ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಸರ್ಕಾರದ ಹೋರಾಟ ಯಶಸ್ಸು ಕಾಣಲಿದೆ. ನಮ್ಮ ಈ ಹೋರಾಟಕ್ಕೆ ಇಲ್ಲಿನ ಜನರೂ ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದೆ.
ಉರುಂಕಿಯಲ್ಲಿ ಕೊವಿಡ್ 19 ಸೋಂಕಿತರು ಇದ್ದ ಅಪಾರ್ಟ್ಮೆಂಟ್ಗೆ ಬೆಂಕಿ ಬಿದ್ದಿದ್ದು ಆಕಸ್ಮಿಕ. ಆದರೆ ಅದನ್ನು ಕೊವಿಡ್ 19 ನಿರ್ಬಂಧ ನಿಯಮಗಳಿಗೆ ಲಿಂಕ್ ಮಾಡಿದ್ದು ದುರದೃಷ್ಟಕರ. ಕೊರೊನಾ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತಗಳೇ ಅಪಾರ್ಟ್ಮೆಂಟ್ಗೆ ಬೆಂಕಿ ಹಚ್ಚಿವೆ ಎಂಬರ್ಥದ ಪೋಸ್ಟ್ಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವಲ್ಲಿ ಸಾಗರೋತ್ತರ ದೇಶಗಳ ಕೈವಾಡವೂ ಇದೆ. ಇಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡಿವೆ ಎಂದೂ ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.
ಶಾಂಘೈನಲ್ಲಿ ಕೂಡ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದಾರೆ. ಇಂದು ಹೋರಾಟದ ತೀವ್ರತೆ ತುಸು ಕಡಿಮೆಯಾಗಿದೆ. ಹೊಸದಾಗಿ ಯಾರೂ ಪ್ರತಿಭಟನೆ ನಡೆದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: Protest in China | ಲಾಕ್‌ಡೌನ್ ವಿರೋಧಿಸಿ ಚೀನಾದಲ್ಲಿ ಅಧ್ಯಕ್ಷ ಜಿನ್‌ಪಿಂಗ್ ವಿರುದ್ಧ ಭಾರೀ ಪ್ರತಿಭಟನೆ!