ತೈಪೆ: ಚೀನಾದ ಎಚ್ಚರಿಕೆ, ಬೆದರಿಕೆಯ ತಂತ್ರಗಳ ನಡುವೆಯೂ ಯುಎಸ್ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬುಧವಾರ ತೈವಾನ್ಗೆ ಭೇಟಿ ಕೊಟ್ಟರು. ತೈವಾನ್ ಅಧ್ಯಕ್ಷೆಯನ್ನು ತ್ಸೈ ಇಂಗ್ ವೆನ್ ಜತೆ ಮಾತುಕತೆ ನಡೆಸಿ, ಅಲ್ಲಿಂದ ತೆರಳಿದ್ದಾರೆ. ನ್ಯಾನ್ಸಿ ಅತ್ತ ಹೋಗುತ್ತಿದ್ದಂತೆ ತೈವಾನ್ ವಿರುದ್ಧ ಚೀನಾ ದೊಡ್ಡಮಟ್ಟದಲ್ಲಿ ಮಿಲಿಟರಿ ಡ್ರಿಲ್ (Taiwan China Conflict) ಪ್ರಾರಂಭಿಸಿದೆ. ಅಂದರೆ ದ್ವೀಪರಾಷ್ಟ್ರವಾದ ತೈವಾನ್ನ್ನು ಸಂಪರ್ಕಿಸುವ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಚೀನಾ ನಾ ನೌಕಾಪಡೆ ಸೈನಿಕರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಸಮುದ್ರದ ಮೇಲೆ ಮಿಲಿಟರಿ ಹೆಲಿಕಾಪ್ಟರ್ಗಳು ಹಾರಾಡುತ್ತಿವೆ.
ತೈವಾನ್ ಮೇಲೆ ಹಿಡಿತ ಸಾಧಿಸಿಸುವ, ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿರುವ ಚೀನಾಕ್ಕೆ ಅಮೆರಿಕದಿಂದ ನ್ಯಾನ್ಸಿ ಪೆಲೋಸಿ ಬಂದಿದ್ದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನ್ಯಾನ್ಸಿ ಏಷ್ಯಾ ಭೇಟಿ ಸಂದರ್ಭದಲ್ಲಿ ತೈವಾನ್ಗೂ ಆಗಮಿಸುತ್ತಾರೆ ಎಂದು ಕೇಳಿದಾಗಿನಿಂದಲೂ ಅಮೆರಿಕವನ್ನು ಬೀಜಿಂಗ್ ಎಚ್ಚರಿಸುತ್ತಲೇ ಇತ್ತು. ಆದರೆ ನ್ಯಾನ್ಸಿ ಅದ್ಯಾವುದಕ್ಕೂ ಜಗ್ಗದೆ ತೈವಾನ್ಗೆ ತೆರಳಿ, ‘ತೈವಾನ್ ನಮ್ಮ ಸ್ನೇಹಿತ. ಆ ದೇಶದ ವಿಷಯದಲ್ಲಿ ನಮ್ಮ ಬದ್ಧತೆ ಎಂದಿಗೂ ಬದಲಾಗುವುದಿಲ್ಲ’ ಎಂದು ಹೇಳಿದ್ದಾರೆ.
ನ್ಯಾನ್ಸಿ ಭೇಟಿಯನ್ನು ತಡೆಯಲು ಸಾಧ್ಯವಾಗದ ಚೀನಾ ಈಗ ಪುಟ್ಟ ರಾಷ್ಟ್ರ ತೈವಾನ್ ಮೇಲೆ ಬಲಪ್ರದರ್ಶನ ಮಾಡುತ್ತಿದೆ. ತೈವಾನ್‌ನ ಒಟ್ಟು ಆರು ಪ್ರಮುಖ ಭಾಗಗಳಲ್ಲಿ ಚೀನಾ ಮಿಲಿಟರಿ ಅಣುಕು ಕಾರ್ಯಾಚರಣೆ ನಡೆಸುತ್ತಿದೆ. ಚೀನಾದ ಸೇನಾ ಹಡಗುಗಳು, ಹೆಲಿಕಾಪ್ಟರ್ಗಳು ಇಲ್ಲಿಂದ ತೆರಳುವವರೆಗೂ ಇಲ್ಲಿನ ಸಂಚಾರ ಮಾರ್ಗಗಳೆಲ್ಲ ಬಂದ್ ಆಗಿರುತ್ತವೆ. ತೈವಾನ್‌ನ ಯಾವುದೇ ಹಡಗುಗಳಾಗಲಿ, ವಿಮಾನಗಳಾಗಲೀ ಈ ಮಾರ್ಗವನ್ನು ಪ್ರವೇಶ ಮಾಡಬಾರದು ಎಂದು ಅಲ್ಲಿನ ಆಡಳಿತ ಹೇಳಿದ್ದಾಗಿ, ತೈವಾನ್ ಮಾಧ್ಯಮಗಳು ವರದಿ ಮಾಡಿವೆ.
ತೈವಾನ್ ಹೇಳೋದೇನು?
ಚೀನಾದ ಸೈನಿಕರು ತೈವಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದನ್ನು ಅಲ್ಲಿನ ಆಡಳಿತ ಖಂಡಿಸಿದೆ. ‘ಚೀನಾ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತಿದೆ. ತೈವಾನ್‌ನ ಪ್ರಾದೇಶಿಕತೆ ವ್ಯಾಪ್ತಿಯನ್ನು ಅತಿಕ್ರಮಣ ಮಾಡಿಕೊಂಡಿದೆ ಮತ್ತು ವಾಯು-ಸಾಗರ ಮಾರ್ಗ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ ಎಂದು ತೈವಾನ್ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಚೀನಾದ ಮಿಲಿಟರಿ ಡ್ರಿಲ್‌ಗಳು ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತವೆ, ತೈವಾನ್‌ನ ಪ್ರಾದೇಶಿಕ ಜಾಗವನ್ನು ಆಕ್ರಮಿಸುತ್ತವೆ ಮತ್ತು ಮುಕ್ತ ವಾಯು ಮತ್ತು ಸಮುದ್ರ ಸಂಚರಣೆಗೆ ನೇರ ಸವಾಲಾಗಿದೆ ಎಂದು ತೈವಾನ್ ಅಧಿಕಾರಿಗಳು ಹೇಳಿದ್ದಾರೆ. ಹಾಗೇ, ಚೀನಾದ ಮಿಲಿಟರಿ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ತೈವಾನ್ ರಕ್ಷಣಾ ಸಚಿವಾಲಯದ ಹೇಳಿದೆ. ಇಷ್ಟೇ ಅಲ್ಲ, ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ನ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಧ್ಯಕ್ಷೀಯ ಕಚೇರಿಯ ವೆಬ್ಸೈಟ್ಗಳು ಹ್ಯಾಕ್ ಆಗಿದ್ದಾಗಿಯೂ ತೈವಾನ್ ಕ್ಯಾಬಿನೆಟ್ನ ವಕ್ತಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತೈವಾನ್ ವಾಯುನೆಲೆಯ ಕಡೆಗೆ ಚೀನಾದ 29 ಯುದ್ಧ ವಿಮಾನಗಳ ರವಾನೆ