Site icon Vistara News

China Population: ಬೇಗ ಮದುವೆಯಾಗಿ, ಬೇಗ ಮಗು ಮಾಡಿ: ಚೀನಾ ಕೌಂಟಿ ನೀಡುತ್ತೆ ನಗದು ಬಹುಮಾನ

china marriage

ಹಾಂಗ್‌ಕಾಂಗ್: ಶತಾಯಗತಾಯ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿರುವ ಚೀನಾದಲ್ಲಿ (China Population) ಅದಕ್ಕಾಗಿ ನವನವೀನ ಕ್ರಮಗಳು ಜಾರಿಯಾಗುತ್ತಿವೆ. ಅಂಥದೊಂದು ಯೋಜನೆಯಲ್ಲಿ, 25 ವರ್ಷದೊಳಗಿನ ವಧುಗಳಿಗೆ (china marriage) ನಗದುರೂಪದ (cash for bride) ಬಹುಮಾನ ನೀಡಲು ಚೀನಾದ ಕೌಂಟಿಯೊಂದು ಮುಂದಾಗಿದೆ.

ಮದುವೆಯಾಗುತ್ತಿರುವ ವಧು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ, ಆಕೆಗೆ ದಂಪತಿಗಳಿಗೆ 1,000 ಯುವಾನ್ (11,330 ರೂ.) ʼಬಹುಮಾನʼ ನೀಡಲು ಪೂರ್ವ ಚೀನಾದ ಚಾಂಗ್‌ಶಾನ್ ಕೌಂಟಿಯ ಆಡಳಿತ ಮುಂದಾಗಿದೆ. ಇದು ಮೊದಲ ಮದುವೆಗಳಿಗೆ ಅನ್ವಯ. ವಯಸ್ಸಿಗೆ ಅನುಗುಣವಾಗಿ ಮದುವೆಯಾಗುವುದು ಮತ್ತು ಮಗು ಹೆರುವುದನ್ನು ಉತ್ತೇಜಿಸಲು ಈ ಬಹುಮಾನವನ್ನು ನೀಡಲಾಗುತ್ತದಂತೆ.

ಇಲ್ಲಿ ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಶಿಶುಪಾಲನೆ, ಫಲವತ್ತತೆ ಮತ್ತು ಶಿಕ್ಷಣ ಸಬ್ಸಿಡಿಗಳನ್ನು ಸಹ ನೀಡಲಾಗುತ್ತಿದೆ. ಆರು ದಶಕಗಳಲ್ಲಿ ಚೀನಾದ ಮಕ್ಕಳ ಸಂಖ್ಯೆ ಹಿಂದೆಂದೂ ಕಾಣದಷ್ಟು ಭಾರಿ ಕುಸಿತ ಕಂಡಿದೆ. ವಯಸ್ಸಾದವರ ಜನಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಅಲ್ಲಿನ ಆಡಳಿತ, ಅಧಿಕಾರಿಗಳು ಇದಕ್ಕಾಗಿ ಆರ್ಥಿಕ ಪ್ರೋತ್ಸಾಹ, ಸುಧಾರಿತ ಶಿಶುಪಾಲನಾ ಸೌಲಭ್ಯ ಇತ್ಯಾದಿಗಳನ್ನು ನೀಡುತ್ತ ಜನನ ಪ್ರಮಾಣ ಹೆಚ್ಚಿಸಲು ತುರ್ತಾಗಿ ಪ್ರಯತ್ನಿಸುತ್ತಿದ್ದಾರೆ.

ಚೀನಾದ ಕಾನೂನುಬದ್ಧ ವಿವಾಹದ ವಯಸ್ಸಿನ ಮಿತಿಯು ಪುರುಷರಿಗೆ 22 ಮತ್ತು ಮಹಿಳೆಯರಿಗೆ 20. ಆದರೆ ಮದುವೆಯಾಗುವ ಜೋಡಿಗಳ ಸಂಖ್ಯೆ ಕುಸಿಯುತ್ತಿದೆ. ಇದು ಜನನ ದರವನ್ನು ಕಡಿಮೆ ಮಾಡಿದೆ. ಒಂಟಿ ಮಹಿಳೆಯರಿಗೆ ಮಕ್ಕಳನ್ನು ಹೊಂದಲು, ಸಾಕಲು ಕಷ್ಟಕರವಾಗಿದೆ. ಜೂನ್‌ನಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ ಮದುವೆ ಪ್ರಮಾಣ 2022ರಲ್ಲಿ 68 ಲಕ್ಷ ಇತ್ತು. ಇದು 1986ರ ನಂತರ ದಾಖಲೆಯ ಕಡಿಮೆ. 2021ಕ್ಕಿಂತ ಕಳೆದ ವರ್ಷ 8 ಲಕ್ಷ ಕಡಿಮೆ ವಿವಾಹಗಳು ನಡೆದಿವೆ.

ಚೀನಾದ ಫಲವತ್ತತೆ ದರ ಈಗಾಗಲೇ ವಿಶ್ವದ ಅತ್ಯಂತ ಕಡಿಮೆ ದರಗಳಲ್ಲಿ ಒಂದಾಗಿದೆ. 2022ರಲ್ಲಿ 1.09ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹೆಚ್ಚಿರುವ ಶಿಶುಪಾಲನಾ ವೆಚ್ಚ, ಶಿಕ್ಷಣ ವೆಚ್ಚ, ಮಕ್ಕಳನ್ನು ಹೊಂದಿದರೆ ವೃತ್ತಿಜೀವನ ನಿಲ್ಲಿಸುವ ಆತಂಕ, ಲಿಂಗ ತಾರತಮ್ಯ ಇವೆಲ್ಲ ಹೆಚ್ಚಿನ ಮಹಿಳೆಯರನ್ನು ಮಗು ಮಾಡುವುದರಿಂದ ದೂರವಿರಿಸಿವೆ.

ಇದನ್ನೂ ಓದಿ: China: ಮತ್ತೆ ಚೀನಾ ಕ್ಯಾತೆ; ಅರುಣಾಚಲ ಪ್ರದೇಶ, ಆಕ್ಸಾಯ್ ಚಿನ್ ಎಲ್ಲಾ ಅದರ ಮ್ಯಾಪ್‌ನೊಳಗೆ!

Exit mobile version