ಕ್ಯಾನ್‌ಬೆರಾ: ಭಾರತದಲ್ಲಿ ಮಾತ್ರವಲ್ಲದೇ ಟಿಕ್ ಟಾಕ್(TikTok) ಸೇರಿದಂತೆ ಅನೇಕ ಚೈನೀಸ್ ಆಪ್‌ಗಳ(Chinese apps) ಬಗ್ಗೆ ಇದೀಗ ಆಸ್ಟ್ರೇಲಿಯಾ(Australia)ದಲ್ಲೂ ಕಳವಳ ವ್ಯಕ್ತವಾಗಿದ್ದು, ಅಲ್ಲಿನ ಸರ್ಕಾರ ಅವುಗಳನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಟಿಕ್‌ಟಾಕ್ ಮಾತ್ರವಲ್ಲದೇ ವಿವಿಧ ಚೀನಾ ನಿರ್ಮಿತ ಮನೋರಂಜನಾ ಆಪ್‌ಗಳು, ಗೇಮಿಂಗ್ ಆಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಅಥವಾ ದಾಖಲೆಗಳನ್ನು ಕಳೆ ಹಾಕುತ್ತಿದೆ ಎಂಬುದು ಬಯಲಾಗಿದೆ.
ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ(Australian Strategic Policy) ಎಂಬ ಸಂಸ್ಥೆಯ ಸಂಶೋಧಕರು ನಡೆಸಿ ಈ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯನ್ನು ಮೇ 2 ರಂದು ಆಸ್ಟ್ರೇಲಿಯಾ ಸರ್ಕಾರ ಮತ್ತು ಇತರ ರಾಷ್ಟ್ರಗಳ ಸರ್ಕಾರಕ್ಕೆ ಸಲ್ಲಿಸಿದ್ದು, ಬೀಜಿಂಗ್‌ನ ಕೆಲವು ಮೂಲಭೂತವಾದ ಮುಖಂಡರು ಚೀನಾದ ಟೆಕ್ ಕಂಪನಿಗಳ ಜೊತೆ ಕೈಜೋಡಿಸಿ ಪ್ರಪಂಚಾದ್ಯಂತ ಸಾಮಾಜಿಕ ಜಾಲತಾಣ ಆಪ್ ಅಥವಾ ಆನ್‌ಲೈನ್ ಗೇಮಿಂಗ್ ಆಪ್‌ಗಳ ಬಳಕೆದಾರರ ವೈಯಕ್ತಿಕ ವಿವರ ಮತ್ತು ದಾಖಲೆಗಳನ್ನು ಕದಿಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಚೀನಾ ಇಡೀ ಪ್ರಪಂಚದಲ್ಲಿ ಅತ್ಯಂತ ಬಲಶಾಲಿ ರಾಷ್ಟ್ರವೆಂದೆನಿಸಿಕೊಳ್ಳಬೇಕೆಂದು ಹವಣಿಸುತ್ತಿದೆ. ಅದಕ್ಕಾಗಿ ಜಾಗತಿಕ ಮಾಹಿತಿ ವ್ಯವಸ್ಥೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಮತ್ತು ಚೀನಾದ ಸಾಂಸ್ಕೃತಿಕ, ತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಪ್ರಭಾವವನ್ನು ಹೆಚ್ಚಿಸಬೇಕು ಪ್ರಯತ್ನ ನಡೆಸುತ್ತಿದೆ. ಆಪ್‌ಗಳು ಕೇಳುವ ಸ್ವವಿವರಗಳು ಚೀನಾಗೆ ಬಹಳ ಉಪಯೋಗ ಆಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಆಪ್‌ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು ಆಸ್ಟ್ರೇಲಿಯಾ ನೀಡಿರುವ ವರದಿ ಬಗ್ಗೆ ಇದುವರೆಗೆ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಿಕ್ ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್ಗಳನ್ನು ನಿಷೇಧಿಸಿದ್ದ ಭಾರತ ಸರ್ಕಾರ ಬಳಿಕ ಚೀನಾ ಮೂಲದ 200ಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಅವುಗಳಲ್ಲಿ 138 ಬೆಟ್ಟಿಂಗ್ ಆ್ಯಪ್ಗಳು ಮತ್ತು 94 ಲೋನ್ ಆ್ಯಪ್ಗಳು ಸೇರಿದ್ದವು. ಈ ಆ್ಯಪ್ಗಳನ್ನು ತಡೆಹಿಡಿಯಲು ಗೃಹ ಸಚಿವಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ನೇರವಾಗಿ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್ ಮಾಡುವಂತೆ ಸವಾಲು ಹಾಕಿದ್ದೇಕೆ?
ಮೊದಲಿಗೆ ಗೃಹ ಇಲಾಖೆಯು 28 ಚೀನೀ ಲೋನ್ ಆ್ಯಪ್ಗಳ ಬಗ್ಗೆ ಪರಿಶೀಲನೆ ನಡೆಸಲು ಆರಂಭಿಸಿತ್ತು. ಆ ಸಂದರ್ಭದಲ್ಲಿ ಅಂಥ 94 ಆ್ಯಪ್ಗಳು ಬೇರೆ ಬೇರೆ ಆನ್‌ಲೈನ್ ತಾಣಗಳಲ್ಲಿ ಲಭ್ಯ ಇದ್ದುದು ಗಮನಕ್ಕೆ ಬಂದಿದೆ. ಈ ಆ್ಯಪ್ಗಳು ಜನರ ಗಮನ ಸೆಳೆದು ಭಾರೀ ಪ್ರಮಾಣದಲ್ಲಿ ಹಣಕಾಸು ವಂಚನೆ ಎಸಗುತ್ತಿವುದು ಗೊತ್ತಾಗಿದೆ. ಅಲ್ಲದೇ, ಈ ಆ್ಯಪ್ಗಳ ಮೂಲಕ ಗೂಢಚಾರಿಕೆ, ಪಿತೂರಿ ಇತ್ಯಾದಿ ಪಾತಕಗಳನ್ನು ಎಸಗುವುದರ ಜೊತೆಗೆ ಜನರ ವೈಯಕ್ತಿಕ ಮಾಹಿತಿಯನ್ನು ಕದ್ದು ಭದ್ರತಾ ಅಪಾಯ ಒಡ್ಡುವಂತೆ ತೋರಿದ್ದವು. ಹೀಗಾಗಿ, ಈ ಅಪ್ಲಿಕೇಶನ್ಗಳನ್ನು ನಿಷೇಧಿಸಲು ಸರ್ಕಾರ ನಿರ್ಧಿಸಿತ್ತು.