ಅಮೆರಿಕ-ಚೀನಾದ ಆಂತರಿಕ ಕಲಹ ನಿನ್ನೆಮೊನ್ನೆಯದಲ್ಲ. ಎರಡೂ ರಾಷ್ಟ್ರಗಳು ಪರಸ್ಪರರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇರುತ್ತವೆ. ಅದರಲ್ಲೂ ಕುತಂತ್ರಕ್ಕೇ ಹೆಸರಾದ ಚೀನಾ ಬರೀ ಅಮೆರಿಕ ಎಂದಲ್ಲ, ತನ್ನ ಮಿತ್ರರಾಷ್ಟ್ರಗಳನ್ನು ಹೊರತುಪಡಿಸಿ, ಉಳಿದೆಲ್ಲ ದೇಶಗಳ ಮೇಲೆ ತನ್ನ ಕೊಂಕು ಕಣ್ಣನ್ನು ಸದಾ ನೆಟ್ಟಿಯೇ ಇರುತ್ತದೆ. ಈಗ ಚೀನಾದ ಬೇಹುಗಾರಿಕಾ ಬಲೂನ್ವೊಂದು ಅಮೆರಿಕದ ವಾಯುಪ್ರದೇಶದಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಆಕಾಶದಲ್ಲಿ ಹಾರಾಡುತ್ತಿರುವ ಈ ಪತ್ತೇದಾರಿ ಬಲೂನ್ ಗುರುವಾರದಿಂದಲೂ ಕಾಣಿಸಿಕೊಳ್ಳುತ್ತಿದ್ದು, ಅದನ್ನು ಶೂಟ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅಮೆರಿಕದ ರಕ್ಷಣಾ ವಿಭಾಗವಾದ ಪೆಂಟಗನ್ ಹೇಳಿದೆ.
ಈ ಬಲೂನ್ ಚೀನಾದಿಂದ ಕಳುಹಿಸಲ್ಪಟ್ಟಿದ್ದೇ ಆಗಿದೆ. ಯುಎಸ್ನ ಅಣ್ವಸ್ತ್ರ ಕ್ಷಿಪಣಿ ಉಡಾವಣೆ ನೆಲೆಯಾದ, ಮೊಂಟಾನಾದಲ್ಲಿರುವ ಮಾಲ್ಮ್ಸ್ಟ್ರೋಮ್ ಏರ್ಫೋರ್ಸ್ ಬೇಸ್ನ ಮೇಲ್ಭಾಗದಲ್ಲಿ ಈ ಪತ್ತೆದಾರಿ ಬಲೂನ್ ಹಾರಾಡುತ್ತಿದೆ. ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಅಮೆರಿಕದ ಪೆಂಟಗನ್ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಚೀನಾದ ಈ ಬೇಹುಗಾರಿಕಾ ಬಲೂನ್ ಮೇಲೆ ಅಮೆರಿಕ ಕಣ್ಣಿಟ್ಟಿದೆ. ಅದನ್ನು ಟ್ರ್ಯಾಕ್ ಮಾಡುತ್ತಿರುವುದಾಗಿಯೂ ಪೆಂಟಗನ್ ಹೇಳಿಕೊಂಡಿದೆ. ಹಾಗೇ, ಈ ಬಗ್ಗೆ ಸಂಪೂರ್ಣ ವರದಿ ಪಡೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬಲೂನ್ ಹೊಡೆದುರುಳಿಸುವಂತೆ ರಕ್ಷಣಾ ಕಾರ್ಯಾಲಯದ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ಗೆ ಹೇಳಿದ್ದಾರೆ. ಆದರೆ ಬಲೂನ್ನಲ್ಲಿ ಏನಾದರೂ ಸ್ಫೋಟಕವಿದ್ದರೆ ಕಷ್ಟ. ಅದು ಕೆಳಗೆ ಬಿದ್ದಾಗ ಬೀಳುವ ಸ್ಥಳದಲ್ಲಿರುವವರಿಗೆ ಅಪಾಯ ಉಂಟಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಮಿಲಿಟರಿ ಹಿರಿಯ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯುಎಸ್ನ ವಾಯುನೆಲೆ ಮೇಲೆ ಹಾರಾಡುತ್ತಿರುವ ಬಲೂನ್ನಿಂದ ಗಂಭೀರ ಸ್ವರೂಪದ ಬೆದರಿಕೆ ಇದ್ದಂತೆ ಅನ್ನಿಸುತ್ತಿಲ್ಲ ಎಂದೂ ಪೆಂಟಗನ್ ಹೇಳಿದೆ.
ಇದನ್ನೂ ಓದಿ: US- china relation: ಅಮೆರಿಕದ ʼಚೀನಾ ಪ್ರಭಾವ ತಡೆ ಸಮಿತಿʼಗೆ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ ಸದಸ್ಯ