Site icon Vistara News

Chris Hipkins: ನ್ಯೂಜಿಲ್ಯಾಂಡ್​ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ರಿಸ್​ ಹಿಪ್​ಕಿನ್ಸ್​​

Chris Hipkins sworn as new Prime Minister Of New Zealand

ನ್ಯೂಜಿಲ್ಯಾಂಡ್​​ನ ನೂತನ ಪ್ರಧಾನಮಂತ್ರಿಯಾಗಿ ಕ್ರಿಸ್​ ಹಿಪ್​ಕಿನ್ಸ್ (New Zealand Prime Minister Chris Hipkins) ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದಿನ ಪ್ರಧಾನಮಂತ್ರಿಯಾಗಿದ್ದ ಜೆಸಿಂಡಾ ಆರ್ಡನ್​ ಅವರು ರಾಜೀನಾಮೆ ಕೊಟ್ಟ ಬಳಿಕ ಲೇಬರ್​ ಪಕ್ಷ, ಕ್ರಿಸ್​ ಹಿಪ್​ಕಿನ್ಸ್ (Chris Hipkins)​ ​​ರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ರಿಸ್​ ಹಿಪ್​ಕಿನ್ಸ್​​ಗೆ ನ್ಯೂಜಿಲ್ಯಾಂಡ್​ ಗವರ್ನರ್​ ಜನರಲ್​ ಸಿಂಡಿ ಕಿರೋ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಇಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಹಿಪ್​ಕಿನ್ಸ್​ ಅವರು ಬಳಿಕ ಮಾತನಾಡಿ, ‘ಹಣದುಬ್ಬರ ಒಂದು ಸಾಂಕ್ರಾಮಿಕ’ ಎಂದು ಹೇಳಿದರು. ಹಾಗೇ, ಲೇಬರ್​ ಪಕ್ಷದ ಮೂಲ ಧ್ಯೇಯೋದ್ದೇಶವಾದ ಆರ್ಥಿಕತೆ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು. ‘ದೇಶದ ಜನಾಭಿಪ್ರಾಯ ಸಂಗ್ರಹಿಸಿ, ಅದರ ಆಧಾರದ ಮೇಲೆ ಯೋಜನೆ ರೂಪಿಸುವಲ್ಲಿ ಲೇಬರ್​ ಪಾರ್ಟಿ ಹಿಂದುಳಿದಿದೆ. ನ್ಯೂಜಿಲ್ಯಾಂಡ್​​ನಲ್ಲಿ ನಮ್ಮ ವಿರೋಧ ಪಕ್ಷಗಳು ಈ ಕೆಲಸ ಮಾಡುತ್ತಿವೆ. ನಾವೂ ಇದೇ ಮಾರ್ಗವನ್ನು ಅನುಸರಿಸಬೇಕು’ ಎಂದು ನೂತನ ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಅಧಿಕಾರ ಸಾಕೆಂದ ನ್ಯೂಜಿಲ್ಯಾಂಡ್‌ ಪ್ರಧಾನಿ ನಮ್ಮವರಿಗೆ ಮಾದರಿಯಾಗಬಲ್ಲರೇ?

ಆರು ವರ್ಷಗಳಿಂದ ನ್ಯೂಜಿಲ್ಯಾಂಡ್ ಪ್ರಧಾನಿಯಾಗಿ ಆಡಳಿತ ನಡೆಸಿದ ಜೆಸಿಂಡಾ ಆರ್ಡನ್ ಜನವರಿ 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೇರೆ ಯಾವುದೇ ಮಹತ್ವವಾದ ಕಾರಣವನ್ನು ಅವರು ಹೇಳಿಲ್ಲ. ‘ನನಗಿನ್ನು ಅಧಿಕಾರ ಸಾಕು, ನಾನೂ ಮನುಷ್ಯಳು’ ಎಂದು ಹೇಳಿ ಹುದ್ದೆಯಿಂದ ಕೆಳಗೆ ಇಳಿದಿದ್ದಾರೆ. ಈ ಮೂಲಕ ವಿಶ್ವ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ. ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಕ್ರಿಸ್​ ಹಿಪ್​ಕಿನ್ಸ್ ಆ ಸ್ಥಾನಕ್ಕೆ ಏರಿದ್ದಾರೆ. ಇವರು ಕೂಡ ಲೇಬರ್​ ಪಕ್ಷದ ಪ್ರಸಿದ್ಧ ನಾಯಕನೇ ಆಗಿದ್ದಾರೆ ಮತ್ತು ಪಕ್ಷದಲ್ಲಿ ಎಲ್ಲರ ಒಲವು, ವಿಶ್ವಾಸ ಗಳಿಸಿಕೊಂಡವರಾಗಿದ್ದಾರೆ.

Exit mobile version