Site icon Vistara News

Coronavirus: ಕೋವಿಡ್‌ನಿಂದ ಮೆದುಳು ಸಮಸ್ಯೆ, ಜಪಾನ್‌ನಲ್ಲಿ ಶೇ.10ರಷ್ಟು ಮಕ್ಕಳ ಸಾವು

Coronavirus In China

ಟೋಕಿಯೊ: ಜಪಾನ್‌ನಲ್ಲಿ ಕೋವಿಡ್‌-19ರ (Coronavirus) ಸೋಂಕಿಗೆ ಗುರಿಯಾದ ಮಕ್ಕಳಲ್ಲಿ, ತೀವ್ರ ತೆರನಾದ ಮೆದುಳಿನ ಸಮಸ್ಯೆಗೆ ಗುರಿಯಾಗಿದ್ದವರ ಪೈಕಿ ಶೇ. 10ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವಾಲಯದ ಸಮೀಕ್ಷಾ ವರದಿ ತಿಳಿಸಿದೆ.

ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್​ಗಳು ಪತ್ತೆ; ಏಪ್ರಿಲ್​​ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ

ಜನವರಿ 2020 ಮತ್ತು ಮೇ 2022ರ ನಡುವಿನ ಅವಧಿಯಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 34 ಮಂದಿ ತೀವ್ರವಾದಂಥ ಮೆದುಳಿನ ಸಮಸ್ಯೆಗೆ ತುತ್ತಾಗಿದ್ದರು. ಇವರಲ್ಲಿ 31 ಮಂದಿಗೆ ಸೋಂಕಿನ ಪೂರ್ವದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲವಾದ್ದರಿಂದ, ಸೋಂಕಿನ ಅಡ್ಡ ಪರಿಣಾಮವಿದು ಎನ್ನುವುದು ಖಚಿತವಾಗಿದೆ. ಈ 31 ಮಕ್ಕಳಲ್ಲಿ 19 ಜನ ಸಂಪೂರ್ಣ ಚೇತರಿಸಿಕೊಂಡಿದ್ದರೆ, ನಾಲ್ವರು ಮೃತಪಟ್ಟು, ಎಂಟು ಮಂದಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಈ ಎಂಟು ಮಂದಿಯಲ್ಲಿ ಐವರಿಗೆ ಗಂಭೀರ ಅಡ್ಡಪರಿಣಾಮಗಳಾಗಿದ್ದು, ಹಾಸಿಗೆ ಹಿಡಿದ ಸ್ಥಿತಿಯಲ್ಲಿರುವ ಇವರಿಗೆ ಇನ್ನೊಬ್ಬರ ದೇಖರೇಖಿಯ ಅಗತ್ಯವಿದೆ. ಇದಿಷ್ಟೂ ರೋಗಗಿಳಲ್ಲಿ ಅರ್ಧದಷ್ಟು ಮಂದಿಗೆ ಸೋಂಕು ತಗುಲಿದಾಗ ಜ್ವರದೊಂದಿಗೆ, ಮೂರ್ಛೆ ಹೋಗುವುದು, ಸೆಳೆವು, ಮಾತು ಮತ್ತು ವರ್ತನೆಯಲ್ಲಿ ವಿಲಕ್ಷಣತೆಯಂಥ ಲಕ್ಷಣಗಳು ಕಂಡುಬಂದಿದ್ದವು. ಇವರಲ್ಲಿ ಹೆಚ್ಚಿನ ಮಂದಿ 2022ರ ಜನವರಿ ಅಥವಾ ಆನಂತರದ ದಿನಗಳಲ್ಲಿ ಸೋಂಕಿಗೆ ತುತ್ತಾಗಿದ್ದು, ಈ ಸಂದರ್ಭದಲ್ಲಿ ಓಮಿಕ್ರಾನ್‌ ಎಲ್ಲೆಡೆ ವ್ಯಾಪಿಸಿತ್ತು. ಕೋವಿಡ್‌ನ ಉಳಿದ ಅಲೆಗಳಲ್ಲಿ ಸೋಂಕಿಗೆ ತುತ್ತಾದವರ ಮೇಲೆ ಆದ ಪರಿಣಾಮಕ್ಕಿಂತ ಓಮಿಕ್ರಾನ್‌ ತಳಿಯ ಪರಿಣಾಮ ಯಾವುದೇ ರೀತಿಯಲ್ಲಿ ಕಡಿಮೆ ಇರಲಿಲ್ಲ ಎಂಬುದು ಇದರಿಂದ ದೃಢಪಟ್ಟಿದೆ.

ಈ ಅಧ್ಯಯನದ ಮುಂಚೂಣಿಯಲ್ಲಿದ್ದ, ಮಕ್ಕಳ ನರರೋಗ ವಿಭಾಗದ ಪ್ರಾಧ್ಯಾಪಕಿ ಜುನಿಚಿ ತಾಕನಶಿ ಅವರ ಪ್ರಕಾರ, ಮಕ್ಕಳಲ್ಲಿ ಜ್ವರದೊಂದಿಗೆ ಸೆಳೆತ, ಪ್ರಜ್ಞೆ ತಪ್ಪುವಂಥ ಲಕ್ಷಣಗಳು ಹತ್ತು ನಿಮಿಷಗಳಲ್ಲಿ ಕಡಿಮೆಯಾಗದಿದ್ದರೆ, ಇದು ಪದೇಪದೆ ಆಗುತ್ತಿದ್ದರೆ ಅಥವಾ ಮಕ್ಕಳ ವರ್ತನೆಯಲ್ಲಿ ಭಿನ್ನತೆ ಕಂಡುಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅಗತ್ಯ. ಇದೀಗ ಕೋವಿಡ್‌-19 ಸೋಂಕಿಗೆ ತುತ್ತಾದವರಲ್ಲಿ ಮಾತ್ರವಲ್ಲ, ವಿಷಮಶೀತ ಜ್ವರದಿಂದ ಬಳಲಿದವರಲ್ಲೂ ಮೆದುಳಿನ ಸಮಸ್ಯೆಗಳು ಕಂಡುಬಂದಿವೆ.

ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್‌ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ

ಈ ನಡುವೆ, ಕೋವಿಡ್‌ ಸೋಂಕಿನ ಪಾರ್ಶ್ವ ಪರಿಣಾಮಗಳ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆತ್ಮಹತ್ಯೆಗೆ ಶರಣಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಆತಂಕಕಕ್ಕೆ ಕಾರಣವಾಗಿದೆ. 2020ರಲ್ಲಿ 499 ಮಂದಿ 18 ವರ್ಷದ ಕೆಳಗಿನ ಎಳೆಯರು ಜೀವ ತೆಗೆದುಕೊಂಡಿದ್ದರು. 2022ರಲ್ಲಿ ಈ ಸಂಖ್ಯೆ 514ಕ್ಕೇರಿದೆ. ಇವರಲ್ಲಿ 17 ಮಂದಿ ಪ್ರಾಥಮಿಕ ಶಾಲೆಯ, 143 ಮಂದಿ ಮಾಧ್ಯಮಿಕ ಶಾಲೆಯ ಮತ್ತು 354 ಮಂದಿ ಪ್ರೌಢಶಾಲೆಯ ಮಕ್ಕಳು.

Exit mobile version