ನವ ದೆಹಲಿ: ಕೊರೊನಾ ವೈರಸ್ ತವರು ಚೀನಾದಲ್ಲೀಗ ಆ ಸೋಂಕಿನದ್ದೆ ಸುದ್ದಿ. ಚೀನಾದ ಹಲವು ಪ್ರಮುಖ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ವಿಧಿಸಿತ್ತು. ಶೂನ್ಯ ಕೊವಿಡ್ 19 ನೀತಿ ಅಳವಡಿಸಿಕೊಂಡಿದ್ದ ಅಲ್ಲಿನ ಕಮ್ಯೂನಿಷ್ಟ್ ಸರ್ಕಾರ, ಜನರನ್ನು ಹೊರಗೆ ಹೋಗದಂತೆ ನಿರ್ಬಂಧಿಸಿತ್ತು. ಆದರೆ ಈ ಲಾಕ್ಡೌನ್ ವಿರುದ್ಧ ಜನರು ತಿರುಗಿಬಿದ್ದಿದ್ದರು. ದಂಗೆಯೆದ್ದು ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಚೀನಾ ಸರ್ಕಾರ ಬೀಜಿಂಗ್, ಶಾಂಘೈನಂತಹ ಪ್ರಮುಖ ನಗರಗಳಲ್ಲಿ ಕೊವಿಡ್ 19 ಲಾಕ್ಡೌನ್ ನಿಯಮಗಳನ್ನು ಸಡಿಲಿಸಿತ್ತು. ಅದೀಗ ಮಾರಣಾಂತಿಕವಾಗಿ ಪರಿಣಮಿಸಿದೆ. ಚೀನಾದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ವಿಪರೀತ ಆಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯುಂಟಾಗುತ್ತಿದೆ.
ಚೀನಾದಲ್ಲಿ ಕೊವಿಡ್ 19 ಸೋಂಕಿಗೆ ಒಳಗಾಗಿ ದುಃಸ್ಥಿತಿಯ ಸನ್ನಿವೇಶವನ್ನು ಅಮೆರಿಕನ್ ಸಾರ್ವಜನಿಕ ಆರೋಗ್ಯ ವಿಜ್ಞಾನಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೊವಿಡ್ 19 ಟಾಸ್ಕ್ಫೋರ್ಸ್ ಮುಖ್ಯಸ್ಥರಾಗಿರುವ ಎರಿಕ್ ಲಿಯಾಂಗ್ ಫೀಗಲ್-ಡಿಂಗ್ ಅವರು ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ಕೊವಿಡ್ 19 ರೋಗಿಗಳ ದಟ್ಟಣೆ ಇರುವ, ಮೃತದೇಹಗಳನ್ನು ಮಂಚದ ಮೇಲೆ ಮಲಗಿಸಿಟ್ಟ ವಿಡಿಯೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ‘ಇನ್ನು ಮೂರು ತಿಂಗಳುಗಳಲ್ಲಿ ಚೀನಾದ ಶೇ.60ರಷ್ಟು ಮತ್ತು ವಿಶ್ವದ ಶೇ.10ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯವಿದೆ. ಲಕ್ಷಾಂತರ ಜನರು ಕೊವಿಡ್ 19ನಿಂದ ಸಾಯುವ ಸಾಧ್ಯತೆಯೂ ದಟ್ಟವಾಗಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ ಈಗಾಗಲೇ ಕೊವಿಡ್ 19ನಿಂದ ಅನೇಕರು ಸಾಯುತ್ತಿದ್ದು, ಸ್ಮಶಾನಗಳಲ್ಲಿ ಶವಸಂಸ್ಕಾರಕ್ಕೂ ದಟ್ಟಣೆ ಉಂಟಾಗಿದೆ. ದಿನದ 24ಗಂಟೆಯೂ ಶವಗಳನ್ನು ಸಂಸ್ಕಾರ ಮಾಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಕೊವಿಡ್ 19 ಶೂನ್ಯ ನೀತಿ ಅಳವಡಿಸಿಕೊಂಡಿದ್ದ ಕಮ್ಯುನಿಷ್ಟ್ ಪಕ್ಷದ ಗುರಿ ಈಗ ಬದಲಾಗಿದೆ. ‘ಯಾರಿಗಾದರೂ ಸೋಂಕು ತಗುಲಲಿ, ಯಾರಾದರೂ ಸಾಯಲಿ’ ಎಂದು ಅದು ಭಾವಿಸದಂತಿದೆ ಎಂದು ಹೇಳಿದ ಫೀಗಲ್-ಡಿಂಗ್, ‘ಚೀನಾದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕೊರೊನಾ ಸೋಂಕು ಹಬ್ಬುತ್ತಿರಲು ಕಾರಣ ಇಲ್ಲಿನ ಲಸಿಕೆ. ಚೀನಾದಲ್ಲಿ ನೀಡಲಾದ ಲಸಿಕೆ ಒಮಿಕ್ರಾನ್ ಸೋಂಕಿನ ವಿರುದ್ಧ ಹೋರಾಡುವಷ್ಟು ಸಾಮರ್ಥ್ಯ ಹೊಂದಿಲ್ಲ. ಹೀಗಾಗಿಯೇ ಅಲ್ಲಿನ ಜನರು ಬಹುಬೇಗನೇ ಸೋಂಕಿಗೆ ಒಳಗಾಗುತ್ತಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: China Protest| ಪ್ರತಿಭಟನೆಗೆ ಮಣಿದ ಚೀನಾ ಆಡಳಿತ; ಕೆಲವು ಪ್ರದೇಶಗಳಲ್ಲಿ ಕೊವಿಡ್ 19 ನಿಯಮಗಳ ಸಡಿಲಿಕೆ