ನ್ಯೂಯಾರ್ಕ್: 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಡೊನಾಲ್ಡ್ ಟ್ರಂಪ್ (Donald Trump) ಅವರು ಪೋರ್ನ್ ಸ್ಟಾರ್ (ನೀಲಿ ಚಿತ್ರ ತಾರೆ) ಸ್ಟಾರ್ಮಿ ಡೇನಿಯಲ್ಸ್ ಎಂಬುವಳಿಗೆ ಗುಟ್ಟಾಗಿ ಹಣಪಾವತಿ ಮಾಡಿದ ಆರೋಪದಡಿ ಅವರ ವಿರುದ್ಧ ನ್ಯೂಯಾರ್ಕ್ನ ಗ್ರ್ಯಾಂಡ್ ಜ್ಯೂರಿ ಕ್ರಿಮಿನಲ್ ದೋಷಾರೋಪ ಹೊರೆಸಿದೆ. ಈ ಮೂಲಕ ಕ್ರಿಮಿನಲ್ ಮೊಕದ್ದಮೆ ಎದುರಿಸಲಿರುವ ಯುಎಸ್ನ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ. ಈ ಕೇಸ್ಗೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ (ಏ.4) ಕೋರ್ಟ್ಗೆ ಹಾಜರಾಗಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು 2024ರ ಅಧ್ಯಕ್ಷೀಯ ಚುನಾವಣೆಗೆ ತಾನು ಅಭ್ಯರ್ಥಿ ಎಂದು ಹೇಳಿಕೊಂಡು, ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪ್ರಚಾರವನ್ನೂ ಪ್ರಾರಂಭ ಮಾಡಿದ್ದಾರೆ. ಆದರೆ ಇದೇ ಹೊತ್ತಲ್ಲಿ ಅವರಿಗೆ ಹೀಗೊಂದು ಹಿನ್ನಡೆಯಾಗಿದೆ. 2016ರಲ್ಲಿ ಟ್ರಂಪ್ ಮತ್ತು ನೀಲಿ ಚಿತ್ರತಾರೆ ನಡುವೆ ನಡೆದಿದ್ದ ಹಣಕಾಸು ವ್ಯವಹಾರವೀಗ ಬಹಿರಂಗಗೊಂಡಿದೆ. ಅಂದಹಾಗೇ, ಟ್ರಂಪ್ ವಿರುದ್ಧ ಈ ಕ್ರಿಮಿನಲ್ ಆರೋಪವನ್ನು ಏಕಾಏಕಿ ಹಾಕಿದ್ದಲ್ಲ. ಹಣಪಾವತಿ ವಿಚಾರಕ್ಕೆ ಸಂಬಂಧಪಟ್ಟಂತೆ ಡೊನಾಲ್ ಟ್ರಂಪ್ ಅವರ ಉದ್ಯಮ, ರಾಜಕೀಯ ಮತ್ತು ವೈಯಕ್ತಿಕ ವ್ಯವಹಾರಗಳ ಬಗ್ಗೆಯೆಲ್ಲ ವರ್ಷಗಳಿಂದಲೂ ತನಿಖೆ ನಡೆಯುತ್ತಿತ್ತು. ಆ ತನಿಖಾ ವರದಿ ಆದಾರದ ಮೇಲೆ ಈಗ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಆರೋಪ ಹೊರೆಸಲಾಗಿದೆ.
ಇದನ್ನೂ ಓದಿ: Donald Trump: ಎರಡು ವರ್ಷಗಳ ನಂತರ ವಾಪಸ್ ಫೇಸ್ಬುಕ್ಗೆ ಬಂದ ಡೊನಾಲ್ಡ್ ಟ್ರಂಪ್; ’ಐ ಆ್ಯಮ್ ಬ್ಯಾಕ್’ ಪೋಸ್ಟ್
ಡೊನಾಲ್ಡ್ ಟ್ರಂಪ್ ಅವರು 2006ರಲ್ಲಿ ಮೊಟ್ಟಮೊದಲು ಪೋರ್ನ್ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ಳನ್ನು ಭೇಟಿಯಾದರು. ಆಕೆಯೊಂದಿಗೆ ಸಲುಗೆ ಬೆಳೆದು, ಲೈಂಗಿಕ ಸಂಪರ್ಕ ಏರ್ಪಟ್ಟಿತ್ತು. ಅದಾದ ಮೇಲೆ 2016ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ವೇಳೆ ಎಲ್ಲಾದರೂ ಡೇನಿಯಲ್ಸ್ ಈ ಬಗ್ಗೆ ಬಾಯ್ಬಿಟ್ಟರೆ ಎಂಬ ಕಾರಣಕ್ಕೆ ಮತ್ತು ಆಕೆ ಮೌನವಾಗಿರುವಂತೆ ಮಾಡಲು ಹಣ ಪಾವತಿ ಮಾಡಿದ್ದಾರೆ ಎಂದು ಆರೋಪ. ಆದರೆ ಡೊನಾಲ್ಡ್ ಟ್ರಂಪ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಡೇನಿಯಲ್ಸ್ ಪರಿಚಯ ಆಗಿದ್ದು ಸತ್ಯ ಆದರೆ, ಆಕೆಯೊಂದಿಗೆ ಎಂದಿಗೂ ಲೈಂಗಿಕ ಸಂಪರ್ಕ ಹೊಂದಿಲ್ಲ. ನನ್ನ ವಿರುದ್ಧ ರಾಜಕೀಯವಾಗಿ ಪಿತೂರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಪೋರ್ನ್ ಸ್ಟಾರ್ ಡೇನಿಯಲ್ಸ್ಳ ಪರ ವಕೀಲರಾದ ಕ್ಲಾರ್ಕ್ ಬ್ರೂಸ್ಟರ್ ಟ್ವೀಟ್ ಮಾಡಿ ‘ಡೊನಾಲ್ಡ್ ಟ್ರಂಪ್ ಅವರು ಡೇನಿಯಲ್ಸ್ಗೆ ನೇರವಾಗಿ ಹಣ ನೀಡುವ ಬದಲು, ಮತ್ತೊಬ್ಬಳು ಮಹಿಳೆಯ ಮೂಲಕ ಪಾವತಿಸಿದ್ದರು. ಆಕೆಯ ಹೆಸರು ಕರೆನ್ ಮೆಕ್ಡೊಗಲ್. ಅವಳೂ ಕೂಡ ಮಾಡೆಲ್ ಆಗಿದ್ದಳು. ಅಷ್ಟೇ ಅಲ್ಲ, ಟ್ರಂಪ್ ತನ್ನೊಂದಿಗೆ ಕೂಡ ಸೆಕ್ಸ್ ಅಫೇರ್ ಇಟ್ಟುಕೊಂಡಿದ್ದರು ಎಂದು ಕರೆನ್ ಹೇಳಿದ್ದಳು. ಆದರೆ ಡೊನಾಲ್ಡ್ ಟ್ರಂಪ್ ಮಾತ್ರ ತಾನೇನೂ ಮಾಡಿಯೇ ಇಲ್ಲ ಎನ್ನುತ್ತಿದ್ದಾರೆ. ವಿಚಾರಣೆ ಆಗಲಿ, ಕಾನೂನಿಗಿಂತ ಯಾರೂ ದೊಡ್ಡವರು ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Donald Trump: ಮಾರ್ಚ್ 21ರಂದು ನನ್ನ ಬಂಧನ ಎಂದ ಡೊನಾಲ್ಡ್ ಟ್ರಂಪ್, ಪ್ರತಿಭಟನೆಗೆ ಕರೆ; ಏನಿದು ಕೇಸ್?