Site icon Vistara News

ಟರ್ಕಿ-ಸಿರಿಯಾ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 50ಸಾವಿರಕ್ಕೆ ಏರಿಕೆ; ಎರಡೂ ದೇಶಗಳ ಎದುರಿದೆ ಸವಾಲುಗಳ ಸಾಲು

Death toll surpasses 50 thousand in Turkey Syria earthquakes

#image_title

ಟರ್ಕಿ-ಸಿರಿಯಾ ಭೀಕರ ಭೂಕಂಪನ (Turkey Earthquake)ದಲ್ಲಿ ಮೃತಪಟ್ಟವರ ಸಂಖ್ಯೆ 50 ಸಾವಿರ ದಾಟಿದೆ. ಅದರಲ್ಲಿ ಟರ್ಕಿ ದೇಶವೊಂದರಲ್ಲೇ 44, 218 ಜನರು ಮೃತಪಟ್ಟಿದ್ದಾಗಿ ಅಲ್ಲಿನ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (AFAD) ಹೇಳಿದೆ. ಹಾಗೇ, ಸಿರಿಯಾದಲ್ಲಿ 5,914 ಮಂದಿ ಭೂಕಂಪಕ್ಕೆ ಬಲಿಯಾಗಿದ್ದು, ಎರಡೂ ದೇಶಗಳಿಂದ ಮಡಿದವರ ಸಂಖ್ಯೆ 50 ಸಾವಿರಕ್ಕೂ ಅಧಿಕ ಎಂದು ಹೇಳಲಾಗಿದೆ. ಇದು ಶುಕ್ರವಾರದವರೆಗಿನ ವರದಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಇನ್ನೊಂದೆಡೆ ಬದುಕಿದ್ದೂ, ಸೂರು-ಅಗತ್ಯವಸ್ತುಗಳನ್ನೆಲ್ಲ ಕಳೆದುಕೊಂಡವರು ಲಕ್ಷಾಂತರ ಮಂದಿ. ಟರ್ಕಿಯಲ್ಲಿ 5 ಲಕ್ಷಕ್ಕೂ ಅಧಿಕ ಜನರಿಗೆ ಈಗ ಹೊಸ ಮನೆಯ ಅಗತ್ಯವಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಟರ್ಕಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಪ್ರಾರಂಭದಲ್ಲಿ 15 ಬಿಲಿಯನ್ ಡಾಲರ್ (ಸುಮಾರು 1500 ಕೋಟಿ ರೂಪಾಯಿ) ವೆಚ್ಚದಲ್ಲಿ 2 ಲಕ್ಷಕ್ಕೂ ಮನೆಗಳನ್ನು ಅಪಾರ್ಟ್​ಮೆಂಟ್ ರೂಪದಲ್ಲಿ ಮತ್ತು 50 ಸಾವಿರಗಳನ್ನು ಸಾದಾ ಮನೆಗಳನ್ನು ಕಟ್ಟಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇನ್ನೂ ಅಗತ್ಯವಸ್ತುಗಳ ಪೂರೈಕೆ, ಆರೋಗ್ಯ ವ್ಯವಸ್ಥೆಗಳೆಲ್ಲ ದೊಡ್ಡ ಸವಾಲಿನಂತಾಗಿದ್ದು, ವಿಶ್ವದ ಹಲವು ದೇಶಗಳು ಟರ್ಕಿ ಬೆನ್ನಿಗೆ ನಿಂತಿವೆ.

ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ; 178 ತಾಸು ಕಟ್ಟಡದ ಅವಶೇಷಗಳಲ್ಲಿ ಸಿಲುಕಿಯೂ ಬದುಕಿ ಬಂದ 6 ವರ್ಷದ ಬಾಲಕಿ

ಫೆ.6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ದೊಡ್ಡಮಟ್ಟದ ಭೂಕಂಪ ಉಂಟಾಗಿತ್ತು. 24ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು. ಟರ್ಕಿಯಲ್ಲಿ ಒಟ್ಟು 11 ಪ್ರಾಂತ್ಯಗಳು ಭೂಕಂಪದ ಹೊಡೆತಕ್ಕೆ ಒಳಗಾಗಿವೆ. ಇಲ್ಲಿ ದೊಡ್ಡದೊಡ್ಡ ವಸತಿ ಕಟ್ಟಡಗಳು, ಆಸ್ಪತ್ರೆಗಳೆಲ್ಲ ಸೇರಿ 1,73,000 ಕಟ್ಟಡಗಳು ಧರೆಗೆ ಉರುಳಿವೆ. ಅದರಡಿಯಲ್ಲಿ ಸಿಲುಕಿದವರ ಹೊರಗೆ ತೆಗೆಯಲು 2,40,000ಕ್ಕೂ ಹೆಚ್ಚು ಮಂದಿ ಶ್ರಮಿಸಿದ್ದಾರೆ. ಸೇನಾ ಸಿಬ್ಬಂದಿ, ಸ್ವಯಂಸಹಾಯಕರು ಎಡೆಬಿಡದೆ ಕೆಲಸ ಮಾಡಿದ್ದಾರೆ. ಭಾರತ ಸೇರಿ ವಿವಿಧ ದೇಶಗಳು ತಮ್ಮಲ್ಲಿನ ರಕ್ಷಣಾ ಸಿಬ್ಬಂದಿಯನ್ನು ಟರ್ಕಿ ಮತ್ತು ಸಿರಿಯಾಕ್ಕೆ ಕಳಿಸಿದ್ದವು. 10 ಲಕ್ಷಕ್ಕೂ ಅಧಿಕ ಜನ ಸದ್ಯ ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿದ್ದಾರೆ.

Exit mobile version