ಲಂಡನ್: ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯ ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದೇ ರೀತಿ, ಬ್ರಿಟನ್ ಸಂಸತ್ತಿನಲ್ಲೂ ದೀಪಾವಳಿ ಸಂಭ್ರಮದ ಆಚರಣೆ (Deepavali Celebration) ನಡೆದಿದೆ. ಲಂಡನ್‌ನ ಹೌಸ್ ಆಫ್ ಪಾರ್ಲಿಮೆಂಟ್ ಸಂಕೀರ್ಣದಲ್ಲಿ ಹರೇ ಕೃಷ್ಣ ಟೆಂಪಲ್‌ನ ಅರ್ಚಕರ ನೇತೃತ್ವದಲ್ಲಿ ಮೊಂಬತ್ತಿ ಬೆಳಗಿ, ಪ್ರಾರ್ಥನೆ ಸಲ್ಲಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಯಿತು.
ಈ ವೇಳೆ ಎಲ್ಲ ಪಕ್ಷದ ಸದಸ್ಯರು, ರಾಯಭಾರಿಗಳು, ಸಮುದಾಯದ ನಾಯಕರು ಮತ್ತು ಇಸ್ಕಾನ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವೆಸ್ಟ್‌ಮಿನಿಸ್ಟರ್ ಸಂಕೀರ್ಣದಲ್ಲೇ ಇರುವ ಸ್ಪೀಕರ್ ಅವರ ಸ್ಟೇಟ್ ರೂಮ್ಸ್‌ನಲ್ಲಿ ಸೋಮವಾರ ಸಂಜೆ ದೀಪಾವಳಿಯನ್ನು ಆಚರಿಸಲಾಯಿತು.
ಇಂಗ್ಲೆಂಡ್ ಹಾಗೂ ಜಗತ್ತಿನಾದ್ಯಂತ ದೀಪಾವಳಿಯನ್ನು ಆಚರಿಸುತ್ತಿರುವ ಎಲ್ಲರಿಗೂ ನಾನು ಶಾಂತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ ಎಂದು ಕಾಮನ್ಸ್ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಹೇಳಿದರು. ಪ್ರತಿಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್, ಇಸ್ಕಾನ್ ಟೆಂಪಲ್ ಪ್ರೆಸಿಡೆಂಟ್ ವಿಶಾಖ ದಾಸಿ, ಭಾರತೀಯ ಮೂಲದ ಹಿರಿಯ ಲೇಬರ್ ಸಂಸದ ವೀರೇಂದ್ರ ಶರ್ಮಾ, ಲಿಬರಲ್ ಡೆಮಾಕ್ರಟಿಕ್ ನವನಿತ್ ಧೋಲ್ಕಿಯಾ ಅವರು ಮೊಂಬತ್ತಿಗಳನ್ನು ಬೆಳಗಿ, ಓಂ ಶಾಂತಿ ಪ್ರಾರ್ಥನೆ ಸಲ್ಲಿಸಿದರು.
ಕಳೆದ ವರ್ಷವೂ ಮೊದಲ ಬಾರಿಗೆ ಸ್ಪೀಕರ್ ಕಚೇರಿಯಲ್ಲಿ ದೀಪಾವಳಿಯನ್ನುಆಚರಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಬ್ರಿಟನ್ ಸಂಸತ್ತಿನ ವೇಳಾಪಟ್ಟಿಯಲ್ಲಿ ದೀಪಾವಳಿ ಆಚರಣೆ ಪಡೆದುಕೊಳ್ಳುವ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು. ಬ್ರಿಟನ್‌ನಲ್ಲಿ ಬ್ರಿಟಿಷ್ ಹಿಂದೂ ಸಮುದಾಯವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಬ್ರಿಟನ್‌ಗೆ ಸಕಾರಾತ್ಮಕ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಬಣ್ಣಿಸಲಾಯಿತು.
ಇದನ್ನೂ ಓದಿ | Deepawali 2022 | ಬರುತಿದೆ ದೀಪಾವಳಿ, ಪುರುಷರಿಗೂ ದಿರಸಿನ ಪ್ರಭಾವಳಿ!