ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಮಂತ್ರಿಯಾಗಿ ದಿನೇಶ್ ಗುಣವರ್ಧನ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಶ್ರೀಲಂಕಾ ಆರ್ಥಿಕತೆ ಕುಸಿತಕ್ಕೆ ತತ್ತರಿಸಿ, ಅಲ್ಲಿ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಂಗಾಪುರಕ್ಕೆ ಪಲಾಯನ ಮಾಡಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗೆ ತೆರವಾಗಿದ್ದ ಅಧ್ಯಕ್ಷಸ್ಥಾನಕ್ಕೆ ಹಿಂದಿನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಖಾಲಿಯಾಗಿದ್ದ ಪ್ರಧಾನಮಂತ್ರಿ ಹುದ್ದೆ ಈಗ ದಿನೇಶ್ ಗುಣವರ್ಧನರಿಗೆ ಒಲಿದಿದೆ. ಅಂದಹಾಗೇ, ನೂತನ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರನಿಲ್ ವಿಕ್ರಮಸಿಂಘೆಯವರಂತೆ ದಿನೇಶ್ ಗುಣವರ್ಧನ ಕೂಡ ರಾಜಪಕ್ಸ ಕುಟುಂಬದ ಆಪ್ತರು. ಅಷ್ಟೇ ಅಲ್ಲ, ರನಿಲ್ ಮತ್ತು ದಿನೇಶ್ ಇಬ್ಬರೂ ಶಾಲಾ ಸಹಪಾಠಿಗಳು. ರನಿಲ್ ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನಕ್ಕೆ ಏರುತ್ತಿದ್ದಂತೆ ಪ್ರಧಾನಿ ಹುದ್ದೆಗೆ ದಿನೇಶ್ ಗುಣವರ್ಧನ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 73 ವರ್ಷದ ದಿನೇಶ್ ಗುಣವರ್ಧನ ಅವರೊಬ್ಬ ಧೀಮಂತ ರಾಜಕಾರಣಿ ಎಂದು ಹೆಸರು ಮಾಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಇವರನ್ನು ಗೃಹ ಸಚಿವನನ್ನಾಗಿ ನೇಮಕ ಮಾಡಲಾಗಿತ್ತು. ಅದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ಶಿಕ್ಷಣ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಒಂದೆಡೆ ರನಿಲ್ ವಿಕ್ರಮಸಿಂಘೆ ತಮ್ಮ ಜವಾಬ್ದಾರಿ ನಿಭಾಯಿಸಲು, ಸಂಪುಟ ರಚನೆ ಮಾಡಲು ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಶ್ರೀಲಂಕಾ ಜನರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗುವುದೂ ನಮಗೆ ಇಷ್ಟವಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಧ್ಯಕ್ಷರ ಕಚೇರಿ ಎದುರು ಹೋರಾಟ ನಡೆಸುತ್ತಿದ್ದಾರೆ. ಇನ್ನು ಶ್ರೀಲಂಕಾ ಆರ್ಥಿಕತೆ ಬಿಕ್ಕಟ್ಟಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿ, ಕೊಲಂಬೊದ ಗಲ್ಲೆ ಫೇಸ್ ಎಂಬಲ್ಲಿ ಕಳೆದ ಮೂರು ತಿಂಗಳಿಂದ ಶಾಂತಿಯುತವಾಗಿ ನಡೆಸಲಾಗುತ್ತಿದ್ದ ಪ್ರತಿಭಟನೆಯ ಮೇಲೆ ಇಂದು ಸೇನಾ ತುಕಡಿಗಳ ದಾಳಿಯಾಗಿದೆ. ಶ್ರೀಲಂಕಾ ಸೈನಿಕರು ಈ ಪ್ರತಿಭಟನಾಕಾರರನ್ನು ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Lanka on fire| ಶ್ರೀಲಂಕಾ ನೂತನ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ವಿರುದ್ಧ ನಿಲ್ಲದ ಪ್ರತಿಭಟನೆ