ಲಂಡನ್: ಬ್ರಿಟನ್ ರಾಣಿ ‘ಕ್ವೀನ್ ಎಲಿಜಬೆತ್’ಅಸ್ವಸ್ಥರಾಗಿದ್ದಾರೆ. ಕ್ವೀನ್ ಎಲಿಜಬೆತ್ ಆರೋಗ್ಯದ ಬಗ್ಗೆ ವೈದ್ಯರೇ ತುಸು ಆತಂಕ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ನಿಗಾದಲ್ಲಿಯೇ ಇರುವಂತೆ ಅವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಲಂಡನ್ನ ಬಕಿಂಗ್ಹ್ಯಾಮ್ ಅರಮನೆಯ ಮೂಲಗಳು ಮಾಹಿತಿ ನೀಡಿವೆ. 96 ವರ್ಷದ ರಾಣಿ ಎಲಿಜಬೆತ್ II ಗೆ ಕಳೆದ ಅಕ್ಟೋಬರ್ನಿಂದಲೂ ಅನಾರೋಗ್ಯ ಕಾಡುತ್ತಿದೆ. ಈಗೀಗಂತೂ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ, ಅಷ್ಟೇ ಅಲ್ಲ ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಇತ್ತೀಚೆಗೆ ಅವರು ನಡೆಸಬೇಕಿದ್ದ ಎಲ್ಲ ಸಭೆಗಳನ್ನೂ ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಬ್ರಿಟನ್ ನೂತನ ಪ್ರಧಾನಿ ಲಿಜ್ ಟ್ರಸ್ ಕೂಡ ಎಲಿಜಬೆತ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ‘ಲಂಡನ್ನ ಬಕಿಂಗ್ಹ್ಯಾಮ್ ಅರಮನೆ ಮೂಲಗಳಿಂದ ಇಂದು ಮಧ್ಯಾಹ್ನ ಬಂದ ಸುದ್ದಿ ಇಡೀ ಬ್ರಿಟನ್ಗೇ ಆತಂಕ ತಂದಿದೆ. ರಾಣಿ ಎಲಿಜಬೆತ್ ಶೀಘ್ರವೇ ಗುಣಮುಖರಾಗಲಿ ಮತ್ತು ಅವರ ಕುಟುಂಬ ಧೈರ್ಯವಾಗಿರಲಿ ಎಂದು ನಾವೆಲ್ಲ ಹಾರೈಸುತ್ತೇವೆ’ ಎಂದು ಹೇಳಿದ್ದಾರೆ.
ಕ್ವೀನ್ ಎಲಿಜಬೆತ್ ಕಳೆದ ಬೇಸಿಗೆಯಿಂದಲೂ ಸ್ಕಾಟ್ಲೆಂಡ್ನ ಬಾಲ್ಮೋರಲ್ ಕೋಟೆಯಲ್ಲಿಯೇ ಇದ್ದಾರೆ. ಇದೀಗ ಅಲ್ಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ವಿಷಯ ಕೇಳಿ ಇಲ್ಲಿ ಬಕಿಂಗ್ಹ್ಯಾಮ್ ಅರಮನೆಯಲ್ಲಿದ್ದ ಅವರ ಕುಟುಂಬದವರೆಲ್ಲ ಸ್ಕಾಟ್ಲೆಂಡ್ಗೆ ತೆರಳುತ್ತಿದ್ದಾರೆ. ಕ್ವೀನ್ ಆರೋಗ್ಯದ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡುವುದಕ್ಕೂ ಮೊದಲು ಅರಮನೆ ಲಂಡನ್ ಪ್ರಧಾನಿಗೆ, ಸಂಸತ್ ಸಿಬ್ಬಂದಿಗೆ ಪತ್ರ ಕಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ಲಿಜ್ ಟ್ರಸ್ ಸಂಪುಟ ಸೇರಿದ ಭಾರತ ಮೂಲದ ಸುಯೆಲ್ಲಾ ಬ್ರಾವರ್ಮನ್; ಗೃಹ ಕಾರ್ಯದರ್ಶಿಯಾಗಿ ನೇಮಕ