ಕ್ವೀನ್ ಎಲಿಜಬೆತ್ ಶ್ವಾನ ಪ್ರಿಯೆಯಾಗಿದ್ದರು. ಅದರಲ್ಲೂ ಕೋರ್ಗಿ ತಳಿಯ ನಾಯಿಗಳೆಂದರೆ ಅವರ ಅದೆಷ್ಟೋ ಫೋಟೋಗಳಲ್ಲಿ ನಾಯಿಗಳೂ ಜತೆಗೆ ಇರುತ್ತಿದ್ದವು. ಹಲವು ತಳಿಗಳಿಗೆ ಸೇರಿದ ಶ್ವಾನಗಳನ್ನು ಸಾಕಿಕೊಂಡು, ಅವುಗಳನ್ನು ಮುದ್ದಿಸುತ್ತಿದ್ದರು. ಮೂಕ ಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಅದೆಷ್ಟರ ಮಟ್ಟಿಗೆ ರಾಣಿಗೆ ಈ ಶ್ವಾನಗಳು ಬದುಕಿನ ಭಾಗವಾಗಿದ್ದವು ಎಂದರೆ, 2012ರಲ್ಲಿ ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಹೊತ್ತು ಸೇರಿ ಹಲವು ವಿಶೇಷ ಸಂದರ್ಭಗಳಲ್ಲೆಲ್ಲ ರಾಣಿ ತನ್ನ ಪ್ರೀತಿಯ ನಾಯಿಗಳೊಂದಿಗೇ ಬರುತ್ತಿದ್ದರು.
ರಾಣಿಗೆ ಶ್ವಾನ ಪ್ರೀತಿ ಶುರುವಾಗಿದ್ದು ಎಲ್ಲಿಂದ?
ಕ್ವೀನ್ ಎಲಿಜಬೆತ್ಗೆ ಶ್ವಾನ ಪ್ರೀತಿ ಶುರುವಾಗಿದ್ದು ಅವರ ಬಾಲ್ಯದಿಂದಲೇ. ಮೊಟ್ಟಮೊದಲು ಅವರ ತಂದೆ, ಕಿಂಗ್ ಜಾರ್ಜ್ VI ಒಂದು ಕರ್ಗಿ ತಳಿಯ ಶ್ವಾನವನ್ನು ಉಡುಗೊರೆ ಕೊಟ್ಟಿದ್ದರು. ಆ ನಾಯಿ ಮನೆಗೆ ಬಂದಾಗ ಎಲಿಜಬೆತ್ಗೆ ಇನ್ನೂ ಏಳುವರ್ಷ. ಶ್ವಾನಕ್ಕೆ ಡೂಕಿ ಎಂದು ಹೆಸರು ಇಟ್ಟುಕೊಂಡಿದ್ದರು. ಅದಾದ ನಂತರ 18ನೇ ವರ್ಷದ ಹುಟ್ಟುಹಬ್ಬಕ್ಕೆ ಸುಸಾನಾ ಎಂಬ ನಾಯಿ ಬಂತು. ಈ ನಾಯಿಯಂತೂ ಮುಂದೆ ರಾಣಿ ಎಲಿಜಬೆತ್ ಮತ್ತು ಅವರ ಪತಿ ಪ್ರಿನ್ಸ್ ಫಿಲಿಪ್ ಹನಿಮೂನ್ಗೆ ಹೋದಾಗಲೂ ಹೋಗಿತ್ತು. ಅಲ್ಲಿ ನಡೆದ ಪಾರ್ಟಿಯಲ್ಲಿ ಹೇಳದೆ, ಕೇಳದೆ ನುಗ್ಗಿ ಸುದ್ದಿ ಮಾಡಿತ್ತು. ಒಟ್ಟಾರೆ ರಾಣಿ 30 ಶ್ವಾನಗಳನ್ನು ಹೊಂದಿದ್ದರು ಎನ್ನಲಾಗಿದೆ. ರಾಣಿ ಎಲಿಜಬೆತ್ಗೆ ಕೊರ್ಗಿ ತಳಿಯ ಬಗ್ಗೆ ಇದ್ದ ಪ್ರೀತಿ, ಬರುಬರುತ್ತ ಡೋರ್ಗಿ ನಾಯಿಗಳ ಬಗ್ಗೆಯೂ ತಿರುಗಿತ್ತು. ಅಂದರೆ ಕೋರ್ಗಿ ಮತ್ತು ಡ್ಯಾಷ್ಹಂಡ್ ತಳಿಗಳ ಕ್ರಾಸ್ ಬ್ರೀಡ್ ಇದು.
ಇದನ್ನೂ ಓದಿ: Queen Elizabeth’s Death | ಯಾರ ಪಾಲಾಗಲಿದೆ ಕೊಹಿನೂರು ವಜ್ರ ಇರುವ ಕ್ವೀನ್ ಎಲಿಜಬೆತ್ರ ಕಿರೀಟ?