Site icon Vistara News

Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

Ebrahim Raisi

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಹಾಗೂ ಅವರ ಎಂಟು ಜನ ಅಧಿಕಾರಿಗಳನ್ನು ಬಲಿಪಡೆದ ಭೀಕರ ಹೆಲಿಕಾಪ್ಟರ್‌ ದುರಂತ (Helicopter Crash)ಕ್ಕೂ ಮುಂಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Video Viral) ಆಗಿದೆ. ಹೆಲಿಕಾಪ್ಟರ್‌ ಹಾರಾಟ ಶುರು ಮಾಡುತ್ತಿರುವ ವಿಡಿಯೋ ಸ್ಥಳೀಯ ವಾಹಿನಿಯಲ್ಲಿ ಬಿತ್ತರವಾಗಿತ್ತು. ಇದೀಗ ಈ ವಿಡಿಯೋ ನೋಡಿ ಇರಾನ್‌ ಜನತೆ ಕಣ್ಣೀರು ಮಿಡಿದಿದ್ದಾರೆ. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿತ್ತು.

ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್‌ ಮೆಹರ್ ಏಜೆನ್ಸಿ ವರದಿ ಮಾಡಿದೆ.

ಇದೀಗ ಈ ದುರ್ಘಟನೆಗೂ ಮುನ್ನ ಚಿತ್ರೀಕರಣಗೊಂಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರೈಸಿ ತನ್ನ ಅಧಿಕಾರಿಗಳ ಜೊತೆ ಕುಳಿತು ಮಾತುಕತೆ ನಡೆಸುತ್ತಿರುವುದನ್ನು ಕಾನಬಹುದಾಗಿದೆ. ಇದಾದ ಕೇವಲ 30ನಿಮಿಷಗಳ ನಂತರ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಸುಮಾರು 16ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರೈಸಿ ಮತ್ತು ಅವರ ಜೊತೆಗಿದ್ದವರು ಮೃತಪಟ್ಟಿರುವ ಬಗ್ಗೆ ಇರಾನ್‌ ದೃಢಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ರೈಸಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ ಅಧ್ಯಕ್ಷ ಡಾ ಸಯ್ಯದ್ ಇಬ್ರಾಹಿಂ ರೈಸಿ ಅವರ ದುರಂತಮಯ ನಿಧನದಿಂದ ತೀವ್ರ ದುಃಖ ಹಾಗೂ ಆಘಾತ ಉಂಟಾಗಿದೆ. ಭಾರತ- ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆಯನ್ನು ಸದಾ ನೆನಪಿಸಿಕೊಳ್ಳಲಾಗುತ್ತದೆ. ಅವರ ಕುಟುಂಬ ಹಾಗೂ ಇರಾನ್‌ನ ಜನತೆಗೆ ನನ್ನ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ಈ ದುಃಖದ ಸಂದರ್ಭದಲ್ಲಿ ಭಾರತವು ಇರಾನ್ ಜತೆಗೆ ಇದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Exit mobile version