ಜೆರುಸಲೇಂ: ಹೆಲಿಕಾಪ್ಟರ್ ಪತನಗೊಂಡು (Helicopter Crash) ದುರಂತ ಸಾವನ್ನಪ್ಪಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಸಾವಿನ ಬೆನ್ನಲ್ಲೇ ಇದೊಂದು ಆಕಸ್ಮಿಕ ಘಟನೆ ಅಲ್ಲ ವಿಧ್ವಂಸಕ ಕೃತ್ಯ ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಪಂಚಾದ್ಯಂತ ಇರಾನ್‌ನ ಬದ್ಧ ವೈರಿ ರಾಷ್ಟ್ರವಾಗಿರುವ ಇಸ್ರೇಲ್(Israel)ನ ಕುಕೃತ್ಯ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ಇಸ್ರೇಲ್ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಈ ದುರಂತಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ.
ರೂಟರ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಅಧಿಕಾರಿಗಳು, ರೈಸಿ ಸಾವಿಗೂ ಇಸ್ರೇಲ್‌ಗೂ ಯಾವುದೇ ಸಂಬಂಧ ಇಲ್ಲ. ಹೆಲಿಕಾಪ್ಟರ್ ದುರಂತದಲ್ಲಿ ಇಸ್ರೇಲ್ ಕೈವಾಡ ಇದೆ ಎಂಬ ಆರೋಪ ನಿರಾಧಾರ. ಈ ದುರ್ಘಟನೆಗೂ ಇಸ್ರೇಲ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧದ ಸಂದರ್ಭದಲ್ಲಿ ಹಮಾಸ್, ಹೆಜ್‌ಬೊಲ್ಲಾ ಮತ್ತು ಹೌತಿಸ್ ಉಗ್ರರಿಗೆ ಇರಾನ್ ಬೆಂಬಲ ನೀಡಿತ್ತು. ಆ ಯುದ್ಧದಲ್ಲಿ ಇಸ್ರೇಲ್‌ನಲ್ಲಿ 1,200 ಜನರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದರು. ಇದಾದ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವಿನ ವೈರತ್ವ ಇನ್ನೂ ಹತ್ತು ಪಟ್ಟು ಹೆಚ್ಚಾಗಿತ್ತು. ಈ ಎಲ್ಲಾ ಅಂಶಗಳನ್ನು ಗಮನಿಸಿ ಅನೇಕರು ರೈಸಿ ಹತ್ಯೆಯಲ್ಲಿ ಇಸ್ರೇಲ್ ಕೈವಾಡ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.
ಜೂ.28ರಂದು ಇರಾನ್‌ನಲ್ಲಿ ಚುನಾವಣೆ
ರೈಸಿ ಸಾವಿನಿಂದ ತೆರವಾಗಿರುವ ಇರಾನ್ ಅಧ್ಯಕ್ಷ ಸ್ಥಾನಕ್ಕೆ ಜೂ.28ರಂದು ಚುನಾವಣೆ ನಡೆಸಲು ನಿರ್ಧರಿಸಿಲಾಗಿದೆ. ಇರಾನಿಯನ್ ಸಂವಿಧಾನದ ಪ್ರಕಾರ ದೇಶದ ಅಧ್ಯಕ್ಷ ಸಾವನ್ನಪ್ಪಿದರೆ ಅಲ್ಲಿನ ಟಾಪ್ ಮೂವರು ಅಧಿಕಾರಿಗಳು 50ದಿನಗಳೊಳಗಾಗಿ ಕಡ್ಡಾಯವಾಗಿ ಚುನಾವಣೆಗೆ ನಡೆಸಲು ಸಿದ್ದತೆ ಮಾಡಬೇಕು. ಪ್ರಸ್ತುತ ಉಪಾಧ್ಯಕ್ಷ ಮೊಹಮ್ಮದ್ ಮೊಕ್ಬರ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ಹಿಸಲಿದ್ದಾರೆ.
ಇರಾನಿನ ಮಾಧ್ಯಮಗಳ ಪ್ರಕಾರ, ರೈಸಿ ಅವರ ಅಂತಿಮ ವಿಧಿವಿಧಾನ ಸಮಾರಂಭಗಳು ಮಂಗಳವಾರದಿಂದ ಗುರುವಾರದವರೆಗೆ ತಬ್ರಿಜ್, ಕೋಮ್, ಟೆಹ್ರಾನ್ ಮತ್ತು ಬಿರ್ಜಾಂಡ್ ನಗರಗಳಲ್ಲಿ ನಡೆಯಲಿದೆ. ಮಸ್ಶಾದ್‌ನಲ್ಲಿರುವ ಇಮಾಮ್ ರೆಜಾ ಶ್ರೈನ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಿರಿಯಾ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಜೋರ್ಡಾನ್, ಇರಾಕ್ ಮತ್ತು ಪಾಕಿಸ್ತಾನದ ನಾಯಕರು ಸೇರಿದಂತೆ ಇರಾನ್‌ನ ಇತರ ಪ್ರಾದೇಶಿಕ ನೆರೆಹೊರೆಯವರು ಮತ್ತು ಮಿತ್ರರಾಷ್ಟ್ರಗಳಿಂದ ಸಂತಾಪ ಸಂದೇಶಗಳು ಹರಿದು ಬಂದಿದೆ.
ಇದನ್ನೂ ಓದಿ: Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ
ಹೆಲಿಕಾಪ್ಟರ್‌ನಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್ ಗವರ್ನರ್ ಮಲೇಕ್ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್ ಅಲಿ ಅಲೆ-ಹಶೇಮ್ ಕೂಡ ಇದ್ದರು. ಮಂಜು ಕವಿದ ವಾತಾವರಣದ ಕಾರಣ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದರು. ಆದರೆ ಲ್ಯಾಂಡಿಂಗ್ ವೇಳೆಯೇ ಹೆಲಿಕಾಪ್ಟರ್ ಅಪಘಾತವಾಗಿದೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಅರಸ್ ನದಿಗೆ ಇರಾನ್ ಹಾಗೂ ಅಜರ್‌ಬೈಜಾನ್ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು.