Site icon Vistara News

Vivek Ramaswamy: ಅಮೆರಿಕ ಚುನಾವಣೆ ಮೊದಲೇ ಭಾರತ ಮೂಲದ ವಿವೇಕ್‌ ರಾಮಸ್ವಾಮಿಯನ್ನು ಹೊಗಳಿದ ಎಲಾನ್‌ ಮಸ್ಕ್

Elon Musk On Vivek Ramaswamy

Elon Musk praises Vivek Ramaswamy as very promising US presidential candidate

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲು (US Presidential Election) ಇನ್ನೊಂದು ವರ್ಷ ಬಾಕಿ ಇದ್ದರೂ, ಅಧ್ಯಕ್ಷ ಗಾದಿ ಮೇಲೆ ಕುಳಿತುಕೊಳ್ಳಲು ಬಯಸುತ್ತಿರುವ ಭಾರತ ಮೂಲದವರ ಸಂಖ್ಯೆ ಹೆಚ್ಚಾಗಿದೆ. ವಿಶ್ವಸಂಸ್ಥೆ ಮಾಜಿ ರಾಯಭಾರಿ, ಭಾರತ ಮೂಲದ ನಿಕ್ಕಿ ಹ್ಯಾಲೆ, ಭಾರತ ಮೂಲದ ಉದ್ಯಮಿ ಹರ್ಷವರ್ಧನ್‌ ಸಿಂಗ್‌, ಉದ್ಯಮಿ ವಿವೇಕ್‌ ರಾಮಸ್ವಾಮಿ (Vivek Ramaswamy) ಅವರು ಈಗಾಗಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಗಾಗಿ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣವು ರಂಗೇರಿದೆ. ಇದರ ಬೆನ್ನಲ್ಲೇ, ವಿವೇಕ್‌ ರಾಮಸ್ವಾಮಿ ಅವರನ್ನು ಉದ್ಯಮಿ, ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಹಾಡಿ ಹೊಗಳಿದ್ದಾರೆ.

ರಾಜಕೀಯ ವಿಶ್ಲೇಷಕ ಟಕ್ಕರ್‌ ಕಾರ್ಲ್‌ಸನ್‌ (Tucker Carlson) ಅವರು ವಿವೇಕ್‌ ರಾಮಸ್ವಾಮಿ ಜತೆಗಿನ ಸಂದರ್ಶನದ ವಿಡಿಯೊವನ್ನು ಎಕ್ಸ್‌ ಜಾಲತಾಣದಲ್ಲಿ (ಮೊದಲು ಟ್ವಿಟರ್)‌ ಹಂಚಿಕೊಂಡಿದ್ದು, “ವಿವೇಕ್‌ ರಾಮಸ್ವಾಮಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಿಪಬ್ಲಿಕನ್‌ ಪಕ್ಷದ ಅತಿ ಕಿರಿಯ ಅಭ್ಯರ್ಥಿ. ಅವರು ಹೇಳುವುದು ಕೇಳಿ” ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಲಾನ್‌ ಮಸ್ಕ್‌, “ಹೌದು, ಅವರು ತುಂಬ ಭರವಸೆಯ ಅಭ್ಯರ್ಥಿ” ಎಂದು ಹೇಳಿದ್ದಾರೆ.

ಅಮೆರಿಕದ ಅತ್ಯಂತ ಹಳೇ ಪಕ್ಷ ಆಗಿರುವ ರಿಪಬ್ಲಿಕನ್​ ಪಾರ್ಟಿ ಸದಸ್ಯರಾಗಿರುವ ವಿವೇಕ್​ ರಾಮಸ್ವಾಮಿ ಅವರು ಕಳೆದ ಫೆಬ್ರವರಿಯಲ್ಲಿ ಚುನಾವಣೆ ಸ್ಪರ್ಧೆ ಕುರಿತು ಘೋಷಣೆ ಮಾಡಿದ್ದರು. ಅಮೆರಿಕದಲ್ಲಿ ಈ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಇನ್ನು ಡೊನಾಲ್ಡ್‌ ಟ್ರಂಪ್‌ ಅವರು ಕೂಡ ಕಾನೂನು ಹೋರಾಟದ ಮಧ್ಯೆಯೇ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದು, ಚುನಾವಣೆ ಕುತೂಹಲ ಮೂಡಿಸಿದೆ.

ಯಾರಿವರು ವಿವೇಕ್‌ ರಾಮಸ್ವಾಮಿ?

ವಿವೇಕ್​ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಪ್ರಭಾವಿ ಎನ್ನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಇಲ್ಲಿಂದ ಯುಎಸ್​ಗೆ ವಲಸೆ ಹೋಗಿದ್ದರು. ವಿವೇಕ್​ ರಾಮಸ್ವಾಮಿ ಹುಟ್ಟಿದ್ದು-ಬೆಳೆದಿದ್ದೆಲ್ಲ ಇದೇ ದೇಶದಲ್ಲಿ. ಅವರಿಗೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್​ ಟ್ರಂಪ್​ ತಾವಂತೂ 2024ರಲ್ಲಿ ಮತ್ತೆ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದರೊಂದಿಗೆ, ಆ ಪಕ್ಷದ ನಿಕ್ಕಿ ಹ್ಯಾಲೆ ಕೂಡ ತಾವೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಇವರೂ ಕೂಡ ಭಾರತ ಮೂಲದವರೇ ಆಗಿದ್ದಾರೆ. ಒಟ್ಟಿನಲ್ಲಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಸ್ಪರ್ಧೆಯೇ ಏರ್ಪಡುವಂತೆ ಕಾಣುತ್ತಿದೆ.

Exit mobile version