Site icon Vistara News

ಫ್ರಾನ್ಸ್‌ ಅಧ್ಯಕ್ಷರಾಗಿ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಪುನರಾಯ್ಕೆ

ಪ್ಯಾರಿಸ್‌: ಫ್ರಾನ್ಸ್‌ ದೇಶ ಮುಂದಿನ ಐದು ವರ್ಷಗಳಿಗೆ ಅಧ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌ ಅವರನ್ನು ಪುನರಾಯ್ಕೆ ಮಾಡಿದೆ.

44 ವರ್ಷ ವಯಸ್ಸಿನ ಮ್ಯಾಕ್ರಾನ್‌ ಅವರಿಗೆ ತೀವ್ರ ಬಲಪಂಥೀಯರಾದ ಲೀ ಪೆನ್‌ ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ನೀಡಿದ್ದರು. ರಾಜಕೀಯವಾಗಿ ನಡುಪಂಥೀಯರಾದ ಮ್ಯಾಕ್ರಾನ್‌ ಅವರಿಗೆ 58.55% ಹಾಗೂ ಲೀ ಪೆನ್‌ ಅವರಿಗೆ 41.5% ಮತಗಳು ದೊರೆತಿವೆ.
ʼʼನನ್ನನ್ನು ಬೆಂಬಲಿಸಲು, ಬಲಪಂಥೀಯ ಆಡಳಿತವನ್ನು ತಡೆಯಲು ನನಗೆ ಮತ ಹಾಕಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಮುಂದೆ ನಾನು ಒಂದು ಬಣದ ಅಭ್ಯರ್ಥಿಯಲ್ಲ, ಎಲ್ಲರ ಅಧ್ಯಕ್ಷʼʼ ಎಂದು ಮ್ಯಾಕ್ರಾನ್‌ ಹೇಳಿದ್ದಾರೆ.
ಲೀ ಪೆನ್‌ ಆಗಮನದ ಬಗ್ಗೆ ಹೂಡಿಕೆದಾರರು ಚಿಂತಿತರಾಗಿದ್ದರು. ಲೀ ಪೆನ್‌ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಬಗ್ಗೆ ಮೆಚ್ಚುಗೆ ಹೊಂದಿದ್ದ ವ್ಯಕ್ತಿಯಾಗಿದ್ದು, ಅವರ ಗೆಲುವು ಯುರೋಪ್‌ ಒಕ್ಕೂಟದಲ್ಲಿ ಕೋಲಾಹಲದ ಸಂಭಾವ್ಯತೆ ತಂದಿಟ್ಟಿತ್ತು. ಮ್ಯಾಕ್ರಾನ್‌ ಗೆಲವಿನಿಂದ ಹೂಡಿಕೆದಾರರು ಹಾಗೂ ಯುರೋಪ್‌ ಒಕ್ಕೂಟ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.

ಮ್ಯಾಕ್ರಾನ್‌ ಅವರ ಈ ಹಿಂದಿನ ಆಡಳಿತಾವಧಿ ಹಲವು ಕ್ಷೋಭೆಗಳಿಗೆ ಸಾಕ್ಷಿಯಾಗಿತ್ತು. ಕೊರೊನಾ ವೈರಸ್‌ ಹಾವಳಿ, ಬೀದಿ ಪ್ರತಿಭಟನೆಗಳು, ಮುಸ್ಲಿಂ ಮೂಲಭೂತವಾದದ ವಿರುದ್ಧ ಅಸಹನೆ, ಹಿಜಾಬ್‌ ನಿಷೇಧದ ಪ್ರತಿಧ್ವನಿಗಳು, ಹಣದುಬ್ಬರ ಮತ್ತು ಏರುತ್ತಿರುವ ಬೆಲೆಗಳು ಇದಕ್ಕೆ ಸಾಕ್ಷಿಯಾಗಿದ್ದವು. ಪ್ರಸ್ತುತ ಹಳೆಯ ಆಡಳಿತದ ರಾಜಕೀಯ ರೀತಿನೀತಿ ಮುಂದುವರಿಯಲಿವೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ವಿಶ್ವನಾಯಕರು ಮ್ಯಾಕ್ರಾನ್‌ ಅವರಿಗೆ ಅಭಿನಂದನೆ ಹೇಳಿದ್ದಾರೆ.

ಯಾರು ಈ ಮ್ಯಾಕ್ರಾನ್?‌

ಮ್ಯಾಕ್ರಾನ್ 1977ರ ಡಿಸೆಂಬರ್ 21ರಂದು ಉತ್ತರ ಫ್ರಾನ್ಸ್‌ನ ಅಮಿಯೆನ್ಸ್‌ನಲ್ಲಿ ಜನಿಸಿದರು. ಅವರ ಪೋಷಕರಿಬ್ಬರೂ ವೈದ್ಯರು, ಇವರು ಮೂವರು ಮಕ್ಕಳಲ್ಲಿ ಹಿರಿಯ. ಅವರ ಬಾಲ್ಯ ಪಿಯಾನೋ ಪಾಠಗಳು, ಕ್ರೀಡೆ, ವಸತಿ ಸ್ಕೂಲ್, ಸ್ಕೀಯಿಂಗ್ ರಜಾದಿನಗಳು ಮತ್ತು ವಿದೇಶ ಪ್ರವಾಸಗಳಿಂದ ಸಮೃದ್ಧವಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿ ಮ್ಯಾಕ್ರಾನ್ ತಮ್ಮ 16ನೇ ವಯಸ್ಸಿನಲ್ಲಿ ಫ್ರೆಂಚ್ ಭಾಷೆಯ ಕೌಶಲ್ಯಕ್ಕಾಗಿ ರಾಷ್ಟ್ರೀಯ ಬಹುಮಾನ ಗೆದ್ದರು.

ಅಮಿಯೆನ್ಸ್‌ನ ಖಾಸಗಿ ಕ್ಯಾಥೋಲಿಕ್ ಶಾಲೆ ಲಾ ಪ್ರಾವಿಡೆನ್ಸ್‌ನಲ್ಲಿ ಅಧ್ಯಯನ ಮಾಡಿದ ನಂತರ, ಮ್ಯಾಕ್ರಾನ್‌ನ ಪೋಷಕರು ತಮ್ಮ ಹದಿಹರೆಯದ ಮಗನನ್ನು ಕಲಿಯಲು ಪ್ಯಾರಿಸ್‌ಗೆ ಕಳುಹಿಸಿದರು. ಅದಕ್ಕೆ ಕಾರಣ ಅವರ ಪ್ರೇಯಸಿಯಿಂದ ದೂರ ಇರಲಿ ಅಂತ! ಆ ಪ್ರೇಯಸಿಯಾದರೋ ಮ್ಯಾಕ್ರಾನ್‌ಗಿಂತ 24 ವರ್ಷ ದೊಡ್ಡವಳು ಮತ್ತು ಮ್ಯಾಕ್ರಾನ್‌ನ ಥಿಯೇಟರ್‌ ಟೀಚರ್‌ ಆಗಿದ್ದವಳು! ಆದರೆ ಹೆತ್ತವರು ಎಷ್ಟು ಪ್ರಯತ್ನಿಸಿದರೂ ಇವರಿಬ್ಬರೂ ಕೆಲವು ವರ್ಷಗಳ ಬಳಿಕ ಮದುವೆಯಾದರು! ಬ್ರಿಗೆಟ್ಟೆ ಟ್ರಾನೆಕ್ಸ್‌ ಎಂಬ ಹೆಸರಿನ ಈಕೆಗೆ ಮೊದಲ ಮದುವೆಯಿಂದ ಮೂವರು ಮಕ್ಕಳಿದ್ದಾರೆ. ಮ್ಯಾಕ್ರಾನ್‌ಗೆ ಮಕ್ಕಳಿಲ್ಲ.

ಇದನ್ನೂ ಓದಿ: Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!

ಪ್ಯಾರಿಸ್‌ಗೆ ಹೋದ ಬಳಿಕ ನಾಂಟೇರೆ ಯೂನಿವರ್ಸಿಟಿಯಲ್ಲಿ ಫಿಲಾಸಫಿ ಪದವಿ ಪಡೆದ ಮ್ಯಾಕ್ರಾನ್‌, ಅಲ್ಲಿನ ಸಾರ್ವಜನಿಕ ಸೇವೆಗೆ ಸೇರಿಕೊಂಡರು. 2012ರಲ್ಲಿ ಆಗಿನ ಅಧ್ಯಕ್ಷ ಪ್ರಾಂಕ್ವಾ ಹಾಲೆಂಡೆ ಜೊತೆಗೆ ಸೇರಿಕೊಂಡರು, ಅವರ ಸಂಪುಟದಲ್ಲಿ ಸಚಿವರಾದರು. 2016ರಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಹಾಲೆಂಡೆ ವಿರುದ್ಧವೇ ಬಂಡಾಯ ಎದ್ದು, ತಮ್ಮದೇ ಪಕ್ಷವನ್ನು (ಎನ್‌ ಮಾರ್ಷ್)‌ ಸ್ಥಾಪಿಸಿ, ಚುನಾವಣೆಗೆ ನಿಂತು ಅಧ್ಯಕ್ಷರಾಗಿ ಆರಿಸಿ ಬಂದರು.

Exit mobile version