ನವದೆಹಲಿ: ಸಿಂಗಾಪುರ ಮತ್ತು ಜ್ಯೂರಿಚ್ ಈ ವರ್ಷ ವಿಶ್ವದ ಅತ್ಯಂತ ದುಬಾರಿ ನಗರವಾಗಿದ್ದು (Expensive Cities), ಜಿನಿವಾ, ನ್ಯೂಯಾರ್ಕ್ ಮತ್ತು ಹಾಂಗ್‌ಕಾಂಗ್ ನಂತರದ ಸ್ಥಾನಗಳಲ್ಲಿವೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (Economist Intelligence Unit-EIU) ತಿಳಿಸಿದೆ. ಈ 173 ನಗರಗಳ ಪಟ್ಟಿಯಲ್ಲಿ ಭಾರತದ ಚೆನ್ನೈ 163 ಮತ್ತು ಅಹಮದಾಬಾದ್ 166ನೇ ಸ್ಥಾನ ಪಡೆದುಕೊಂಡಿವೆ.
ಸಾಮಾನ್ಯವಾಗಿ ಬಳಸುವ 200ಕ್ಕೂ ಹೆಚ್ಚು ಸರಕುಗಳು ಮತ್ತು ಸೇವೆಗಳಿಗೆ ಸ್ಥಳೀಯ ಕರೆನ್ಸಿ ಪರಿಭಾಷೆಯಲ್ಲಿ ಬೆಲೆಗಳು ಶೇಕಡಾ 7.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ದಾಖಲೆಯ ಶೇಕಡಾ 8.1ರಷ್ಟು ಹೆಚ್ಚಳ ಕಂಡು ಬಂದಿತ್ತು. ಈ ವರ್ಷದ ಸಮೀಕ್ಷೆಯು ವಿಶ್ವದ 173 ಪ್ರಮುಖ ನಗರಗಳನ್ನು ಒಳಗೊಂಡಿದ್ದರೂ, ಕೈವ್ (ಇದನ್ನು 2022ರಲ್ಲಿ ಸಮೀಕ್ಷೆ ಮಾಡಲಾಗಿಲ್ಲ) ಮತ್ತು ಕ್ಯಾರಕಾಸ್ (ಇದು ಕಳೆದ ವರ್ಷದಂತೆ ಅತಿಯಾದ ಹಣದುಬ್ಬರವನ್ನು ಎದುರಿಸುತ್ತಿದೆ) ಅನ್ನು ಹೊರಗಿಡುವ ಮೂಲಕ ಜಾಗತಿಕ ಸರಾಸರಿಯನ್ನು ಲೆಕ್ಕ ಹಾಕಲಾಗಿದೆ.
9ನೇ ಬಾರಿ ಅಗ್ರ ಸ್ಥಾನದಲ್ಲಿ ಸಿಂಗಾಪುರ
ಹಲವಾರು ವಿಭಾಗಗಳಲ್ಲಿನ ಬೆಲೆಯ ಹೆಚ್ಚಳದಿಂದಾಗಿ ಸಿಂಗಾಪುರ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ಅಗ್ರಸ್ಥಾನ ಪಡೆದಂತಾಗಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿಶ್ವದ ಅತಿ ಹೆಚ್ಚಿನ ಸಾರಿಗೆ ಬೆಲೆಯನ್ನು ಹೊಂದಿದೆ. ಅಲ್ಲದೆ ಇಲ್ಲಿ ಬಟ್ಟೆ, ದಿನಸಿ ಮತ್ತು ಮದ್ಯಕ್ಕೆ ದುಬಾರಿ ಬೆಲೆ ಇದೆ.
ಜ್ಯೂರಿಚ್ ಆರನೇ ಸ್ಥಾನದಿಂದ ಜಿಗಿದು ಸಿಂಗಾಪುರದ ಜತೆ ಅಗ್ರ ಸ್ಥಾನವನ್ನು ಹಂಚಿಕೊಂಡಿದೆ. ಕಳೆದ ವರ್ಷ ಸಿಂಗಾಪುರದೊಂದಿಗೆ ಮೊದಲ ಸ್ಥಾನದಲ್ಲಿದ್ದ ನ್ಯೂಯಾರ್ಕ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೂರು ವರ್ಷಗಳ ನಂತರ ಮತ್ತೆ ಅಗ್ರಸ್ಥಾನದಲ್ಲಿರುವ ಜ್ಯೂರಿಚ್‌ನ ಸ್ಥಾನ ದಿನಸಿ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆಯ ಹೆಚ್ಚಿನ ಬೆಲೆಗಳಿಂದಾಗಿ ಮೇಲಕ್ಕೇರಿದೆ.
ಏಷ್ಯಾದ 2 ನಗರಗಳು
ಒಟ್ಟಾರೆಯಾಗಿ ಈ ವರ್ಷ ಅಗ್ರ ಹತ್ತು ನಗರಗಳಲ್ಲಿ ಎರಡು ಏಷ್ಯಾದ ನಗರಗಳು (ಸಿಂಗಾಪುರ್ ಮತ್ತು ಹಾಂಗ್‌ಕಾಂಗ್), ನಾಲ್ಕು ಯುರೋಪಿಯನ್ ನಗರಗಳು (ಜ್ಯೂರಿಚ್, ಜಿನಿವಾ, ಪ್ಯಾರಿಸ್ ಮತ್ತು ಕೋಪನ್ ಹ್ಯಾಗನ್), ಮೂರು ಅಮೆರಿಕ ನಗರಗಳು (ನ್ಯೂಯಾರ್ಕ್, ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ) ಮತ್ತು ಇಸ್ರೇಲ್‌ನ ಟೆಲ್ ಅವೀವ್ ಸೇರಿವೆ. ಈ ಸಮೀಕ್ಷೆಯನ್ನು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾಗುವ ಮೊದಲು ನಡೆಸಲಾಗಿತ್ತು. ಜಾಗತಿಕವಾಗಿ ಯುಟಿಲಿಟಿ ಬೆಲೆಗಳು (ಗೃಹ ಇಂಧನ ಮತ್ತು ನೀರಿನ ಬಿಲ್‌ಗಳು) ಸಮೀಕ್ಷೆಯಲ್ಲಿ ಒಳಗೊಂಡಿವೆ. ಅನೇಕ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಬೆಲೆಯಲ್ಲಿ ಹೆಚ್ಚಳ ದಾಖಲಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: Henry Kissinger: 2ನೇ ಮಹಾಯುದ್ಧದ ಸೈನಿಕ, ನೊಬೆಲ್ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ಇನ್ನಿಲ್ಲ
“ಇಸ್ರೇಲ್-ಹಮಾಸ್ ಯುದ್ಧ ಇಂಧನ ಬೆಲೆಗಳನ್ನು ಹೆಚ್ಚಿಸಲಿದೆ. ಅಲ್ಲದೆ ಎಲ್ ನಿನೊ ಪರಿಣಾಮದಿಂದ ನಿರೀಕ್ಷೆಗಿಂತ ಆಹಾರ ಬೆಲೆಗಳು ಮತ್ತಷ್ಟು ಹೆಚ್ಚುವ ಅಪಾಯವಿದೆʼʼ ಎಂದು ಮೂಲಗಳು ತಿಳಿಸಿವೆ.
ಟಾಪ್ 10 ದುಬಾರಿ ನಗರಗಳು
- ಸಿಂಗಾಪುರ
- ಜ್ಯೂರಿಚ್-ಸ್ವಿಜರ್ಲ್ಯಾಂಡ್
- ಜಿನಿವಾ-ಸ್ವಿಜರ್ಲ್ಯಾಂಡ್
- ನ್ಯೂಯಾರ್ಕ್-ಅಮೆರಿಕ
- ಹಾಂಗ್‌ಕಾಂಗ್
- ಲಾಸ್ ಏಂಜಲೀಸ್-ಅಮೆರಿಕ
- ಪ್ಯಾರಿಸ್-ಫ್ರಾನ್ಸ್
- ಕೋಪನ್ ಹ್ಯಾಗನ್, ಡೆನ್ಮಾರ್ಕ್
- ಟೆಲ್ ಅವೀವ್, ಇಸ್ರೇಲ್
- ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ