Site icon Vistara News

ಛಿದ್ರವಾದ ರೆಸ್ಟೋರೆಂಟ್​, 31 ಮಂದಿ ದುರ್ಮರಣ; ರಸ್ತೆಗೆ ಬಿದ್ದ ಹೆಣಗಳು, ಅವಶೇಷಗಳು

Explosion In Restaurant

#image_title

ಚೀನಾದ ವಾಯುವ್ಯ ನಗರ ಯಿಂಚ್ವಾನ್​ನ ರೆಸ್ಟೋರೆಂಟ್​​ (China Restaurant)ನಲ್ಲಿ ಎಲ್​​ಪಿಜಿ ಸಿಲಿಂಡರ್ ಗ್ಯಾಸ್​ ಸ್ಫೋಟವಾಗಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಏಳು ಜನರಿಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಚೀನಾದ ಶಿನ್​​ಹ್ವಾ ಸುದ್ದಿ ಮಾಧ್ಯಮ ವರದಿ ಮಾಡಿದೆ. ಸ್ಫೋಟದ ರಭಸಕ್ಕೆ ರೆಸ್ಟೋರೆಂಟ್​​ನ ಕುರ್ಚಿಗಳು, ಕಿಟಕಿಗಳು, ಬಾಗಿಲುಗಳೆಲ್ಲ ಛಿದ್ರವಾಗಿದೆ (Fire in China Restaurant). ಅದರ ಅವಶೇಷಗಳು, ಮೃತದೇಹಗಳು ಚೂರಾಗಿ ರಸ್ತೆಗೆ ಬಂದು ಬಿದ್ದಿವೆ. ಸ್ಫೋಟಗೊಂಡ ರೆಸ್ಟೋರೆಂಟ್ ಇರುವ ಈ ರಸ್ತೆಯಲ್ಲಿ, ಅಲ್ಲೇ ಅಕ್ಕಪಕ್ಕ ಇನ್ನೂ ಹಲವು ಉಪಾಹಾರಗೃಹಗಳು ಇವೆ. ಅದೃಷ್ಟಕ್ಕೆ ಸುತ್ತಮುತ್ತಲ ಮನೆಗಳಿಗೆ, ಹೋಟೆಲ್​, ರೆಸ್ಟೋರೆಂಟ್​ಗಳಿಗೆ ಏನೂ ಆಗಲಿಲ್ಲ ಎಂದು ಹೇಳಲಾಗಿದೆ.

ಇಂದಿನಿಂದ ಚೀನಾದಲ್ಲಿ ಡ್ರ್ಯಾಗನ್​ ಬೋಟ್​ ಉತ್ಸವ ಶುರುವಾಗಲಿದ್ದು, ಮೂರು ದಿನ ಇರಲಿದೆ. ಅಲ್ಲಿನ ಸರ್ಕಾರಿ ಕೆಲಸ, ಶಾಲಾ-ಕಾಲೇಜುಗಳಿಗೆಲ್ಲ ರಜಾ. ಹೀಗಾಗಿ ನಿನ್ನೆ ರಾತ್ರಿಯಿಂದಲೇ ರೆಸ್ಟೋರೆಂಟ್, ಹೋಟೆಲ್​ಗಳೆಲ್ಲ ತುಂಬಿ ತುಳುಕುತ್ತಿದ್ದವು. ಚೀನಾ ಕ್ಯಾಲೆಂಡರ್​​ನ ಐದನೇ ತಿಂಗಳ ಐದನೇ ದಿನ ಈ ಡ್ರ್ಯಾಗನ್​ ಬೋಟ್ ಫೆಸ್ಟಿವಲ್​ ನಡೆಯುತ್ತದೆ. ಇದು ಚೀನಾದ ಸಾಂಪ್ರದಾಯಿಕ ಉತ್ಸವವಾಗಿದ್ದು, ವಿವಿಧ ಪ್ರದೇಶಗಳಲ್ಲಿ ಬೋಟ್​ ರೇಸ್​ಗಳೆಲ್ಲ ನಡೆಯುತ್ತದೆ. ಅಂತೆಯೇ ಈ ರೆಸ್ಟೋರೆಂಟ್​ಗೂ ಬುಧವಾರ ಸಂಜೆಯಿಂದಲೇ ಜಾಸ್ತಿ ಜನ ಬರುತ್ತಿದ್ದರು. ರಾತ್ರಿ 8.40ರ ಹೊತ್ತಿಗೆ ಭಯಂಕರವಾಗಿ ಸ್ಫೋಟವಾಗಿದೆ. ಕೂಡಲೇ ಅಲ್ಲಿಗೆ ಅಗ್ನಿಶಾಮಕದಳದ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ತೆರಳಿದ್ದಾರೆ.

ಇದನ್ನೂ ಓದಿ: Viral News : ಹೆಂಡತಿಯನ್ನು ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ ಗಂಡ!

ಚೀನಾದ ಅಧ್ಯಕ್ಷ ಷಿ ಜಿನ್​ಪಿಂಗ್​ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆಗಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ. ಹಾಗೇ, ಎಲ್ಲ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ, ಪ್ರಮುಖವಾಗಿ ಜನ ಸೇರುವ ಪ್ರದೇಶಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಕಟಣೆ ಹೊರಡಿಸಿದ್ದಾರೆ. ಚೀನಾದ ವಾಯುವ್ಯ ಭಾಗದ ಷಿನ್‌ಜಿಯಾಂಗ್ ನಗರದ ಅಪಾರ್ಟ್​ಮೆಂಟ್​ವೊಂದಕ್ಕೆ ಕಳೆದ ವರ್ಷ ನವೆಂಬರ್​ನಲ್ಲಿ ಬೆಂಕಿಬಿದ್ದು 10 ಮಂದಿ ಮೃತಪಟ್ಟಿದ್ದರು.

Exit mobile version