ಯುನೈಟೆಡ್ ಸ್ಟೇಟಸ್ನ ಟೆಕ್ಸಾಸ್ನಲ್ಲಿರುವ ಸೌತ್ಫಾರ್ಕ್ ಡೇರಿ ಫಾರ್ಮ್ನಲ್ಲಿ (ಹಾಲು ಉತ್ಪಾದಕ ಸಂಸ್ಥೆ ಮತ್ತು ಹಸು ಸಾಕಣೆ ಕೇಂದ್ರ)ಯಲ್ಲಿ ದೊಡ್ಡಮಟ್ಟದ ಸ್ಫೋಟ ಉಂಟಾಗಿ (Texas farm fire) 18 ಸಾವಿರಕ್ಕೂ ಅಧಿಕ ಹಸುಗಳು ಮೃತಪಟ್ಟಿದ್ದಾಗಿ ವರದಿಯಾಗಿದೆ. ಡೇರಿಯಲ್ಲಿ ಸ್ಫೋಟವಾದ ಬೆನ್ನಲ್ಲೇ, ಬೆಂಕಿ ಹೊತ್ತಿ ಉರಿದಿದೆ. ಅನೇಕ ಹಸುಗಳು ಸಜೀವ ದಹನಗೊಂಡಿದ್ದರೆ, ಇನ್ನೂ ಹಲವು ಹಸುಗಳು ಉಸಿರುಗಟ್ಟಿ ಮೃತಪಟ್ಟಿದ್ದಾವೆ. ಆದರೆ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಅಂದಹಾಗೇ, ಈ ಹಸು ಸಾಕಣೆ ಕೇಂದ್ರದ ಮಾಲೀಕತ್ವವನ್ನು ಕುಟುಂಬವೊಂದು ಹೊಂದಿದ್ದು, ಟೆಕ್ಸಾಸ್ನಲ್ಲಿನ ಅತಿದೊಡ್ಡ ಹಾಲು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿದೆ. ಡೇರಿಯ ಮಾಲೀಕತ್ವ ಹೊಂದಿರುವ ಕುಟುಂಬದವರು ಯಾರೂ ಇನ್ನೂ ಈ ಬಗ್ಗೆ ಹೇಳಿಕೆ ನೀಡಿಲ್ಲ.
ಈ ಹಸು ಸಾಕಣೆ ಮತ್ತು ಹಾಲು ಉತ್ಪಾದಕ ಕೇಂದ್ರದಲ್ಲಿ ಅದೆಷ್ಟರ ಮಟ್ಟಿಗಿನ ದೊಡ್ಡ ಸ್ಫೋಟವಾಗಿತ್ತು ಅಂದರೆ, ಬೆಂಕಿಯ ಹೊಗೆ ಮುಗಿಲೆತ್ತರಕ್ಕೆ ಮುಟ್ಟಿತ್ತು. ಅಲ್ಲಿನ ಕ್ಯಾಸ್ಟ್ರೋ ಕೌಂಟಿಯ ಪೊಲೀಸ್ ಠಾಣೆ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ. ಸ್ಫೋಟದ ವೇಳೆ ಒಬ್ಬೇ ಒಬ್ಬ ವ್ಯಕ್ತಿ ಈ ಕೇಂದ್ರದೊಳಗೆ ಸಿಲುಕಿದ್ದ, ಆತನನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ ಈ ಡೇರಿಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಅಗ್ನಿಶಾಮದಳದವರು ಅಲ್ಲಿಯೇ ಬೀಡುಬಿಟ್ಟಿದ್ದಾರೆ.
ಇದನ್ನೂ ಓದಿ: Kunigal fire | ಕುಣಿಗಲ್‌ನಲ್ಲಿ ಭಾರಿ ಬೆಂಕಿ ದುರಂತ: ಧಗಧಗನೆ ಹೊತ್ತಿ ಉರಿದ ಆಟೋ ರಿಕ್ಷಾ, ಓಮ್ನಿ ಕಾರುಗಳು
ಪ್ರತಿವರ್ಷವೂ ಹೀಗೆ ಒಂದಲ್ಲ ಒಂದು ಕಡೆ ಕೊಟ್ಟಿಗೆ, ಹಾಲು ಉತ್ಪಾದಕ ಕೇಂದ್ರಗಳಿಗೆ ಬೆಂಕಿ ಬಿದ್ದು, ಸಾವಿರಾರು ಮೂಕ ಪ್ರಾಣಿಗಳು ಕೊಲ್ಲಲ್ಪಡುತ್ತಿವೆ. ಹೀಗಾಗಿ ಇಂಥ ಕೇಂದ್ರವಿರುವ ಕಟ್ಟಡಗಳಲ್ಲಿ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ಅಲ್ಲಿನ ಪ್ರಾಣಿ ಕಲ್ಯಾಣ ಸಂಸ್ಥೆ ಆಗ್ರಹಿಸಿದೆ. ಕಳೆದ ಒಂದು ದಶಕದಲ್ಲಿ ಸುಮಾರು 6.5 ಮಿಲಿಯನ್ ಪ್ರಾಣಿಗಳು ಹೀಗೆ ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿವೆ ಎಂದೂ ಹೇಳಲಾಗಿದೆ.