Site icon Vistara News

Joe Biden : ಅಮೆರಿಕ ಅಧ್ಯಕ್ಷರ ಮನೆಯಲ್ಲಿ ಮತ್ತೆ ಸಿಕ್ಕ ದಾಖಲೆಪತ್ರಗಳು! ಈ ಬಗ್ಗೆ ಬೈಡೆನ್ ಹೇಳೋದೇನು?

FBI Searches houses of US president Joe biden

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ಅವರ ನಿವಾಸದಲ್ಲಿ ಮತ್ತಷ್ಟು ಕ್ಲಾಸಿಫೈಡ್ ದಾಖಲೆಗಳು ಪತ್ತೆಯಾದ ಬೆನ್ನಲ್ಲೇ ಇಡೀ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಅಧ್ಯಕ್ಷರು ಮಾಡುತ್ತಿದ್ದಾರೆ. ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿರುವ ಅಧ್ಯಕ್ಷರ ನಿವಾಸವನ್ನು ಎಫ್‌ಬಿಐ (FBI) ಶೋಧ ನಡೆಸಿದೆ. ಆಗ, ಸುಮಾರು 13 ಗಂಟೆಗಳ ಕಾಲ ನಡೆದ ಈ ಶೋಧದಲ್ಲಿ ಸುಮಾರು 6 ಕ್ಲಾಸಿಫೈಡ್ ದಾಖಲೆಗಳು ದೊರೆತಿವೆ. ಈ ಕುರಿತಾದ ಮಾಹಿತಿಯನ್ನು ಬೈಡೆನ್ ಅವರ ವಕೀಲರು ಹಂಚಿಕೊಂಡಿದ್ದಾರೆ. ಬೈಡೆನ್ ಅವರ ಖಾಸಗಿ ವಿಳಾಸದಲ್ಲಿ ಕೆಲವು ದಾಖಲೆಗಳು ದೊರೆತ ಬಳಿಕ, ಕಳೆದ ನವೆಂಬರ್‌ನಿಂದ ಇದುವರೆಗೆ ನಾಲ್ಕನೇ ಬಾರಿಗೆ ಈ ರೀತಿಯ ಶೋಧ ಕಾರ್ಯಾರಣೆ ನಡೆದಿದೆ. ಏತನ್ಮಧ್ಯೆ, ಬೈಡೆನ್ ಅವರಿಗೆ ಸೇರಿದ ಖಾಸಗಿ ಆಸ್ತಿ, ಮನೆಗಳಲ್ಲೂ ಶೋಧ ನಡೆಸಬೇಕೆಂದು ಪ್ರತಿಪಕ್ಷದ ನಾಯಕರು ಒತ್ತಾಯಿಸಿದ್ದಾರೆ.

ಬೈಡೆನ್ ಅವರ ವಕೀಲ ಬಾಬ್ ಬಾಯರ್, ನ್ಯಾಯಾಂಗ ಇಲಾಖೆಯು ಕ್ಲಾಸಿಫೈಡ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಹೊಂದಿರುವ ದಾಖಲೆಗಳನ್ನು ಒಳಗೊಂಡಿರುವ ಆರು ದಾಖಲೆ ಪತ್ರಗಳನ್ನು ಎಫ್‌ಬಿಐ ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಬೈಡೆನ್‌ ಅವರು ಉಪಾಧ್ಯಕ್ಷರಾಗಿದ್ದಾಗ ವರ್ಗೀಕೃತ ಎಂದು ಪರಿಗಣನೆಯಾಗಿದ್ದ ದಾಖಲೆಗಳು ಪತ್ತೆಯಾಗಿವೆ. ಆದರೆ ಈ ಘಟನೆಯನ್ನು ತಣ್ಣಗಾಗಿಸಲು ಬೈಡೆನ್‌ ಯತ್ನಿಸಿದ್ದು, 6 ದಾಖಲಾತಿಗಳನ್ನು ತಪ್ಪಾಗಿ ಮನೆಯಲ್ಲಿ ಇಡಲಾಗಿತ್ತು ಎಂದು ಹೇಳಿದ್ದಾರೆ.

ಕೆಲವು ದಾಖಲೆಗಳು ತುಂಬ ಹಳೆಯದ್ದಾಗಿವೆ. ಬೈಡೆನ್ ಅವರು ಡೆಲವೇರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1973ರಿಂದ 2009ರವರೆಗೆ ಸೆನೆಟ್ ಸದಸ್ಯರಾಗಿದ್ದರು. ಆ ಸಮಯದಲ್ಲಿನ ಕೆಲವು ದಾಖಲೆಗಳು ಪತ್ತೆಯಾಗಿವೆ. ಇನ್ನು ಕೆಲವು, ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದಾಗಿನ ದಾಖಲೆಗಳಾಗಿವೆ. ಬೈಡೆನ್ ಅವರು 2009ರಿಂದ 2017ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿದ್ದರು ಎಂದು ಬಾಯರ್ ಅವರು ತಿಳಿಸಿದ್ದಾರೆ.

ಎಫ್‌ಬಿಐ ಶೋಧದ ವೇಳೆ, ಅಧ್ಯಕ್ಷ ಜೋ ಬೈಡೆನ್ ಆಗಲೀ ಅವರ ಪತ್ನಿ ಜಿಲ್ ಬೈಡೆನ್ ಆಗಲಿ ಮನೆಯಲ್ಲಿ ಇರಲಿಲ್ಲ ಎಂದು ಪ್ರೆಸಿಡೆಂಟ್ ಅವರಿಗೆ ವಿಶೇಷ ಕಾನೂನು ಸಲಹೆಗಾರರಾಗಿರುವ ರಿಚರ್ಡ್ ಸೌಬರ್ ಅವರು ತಿಳಿಸಿದ್ದಾರೆ. ಈಗ ದೊರೆತ ಕ್ಲಾಸಿಫೈಡ್ ದಾಖಲೆಗಳು ಈ ಹಿಂದೆ ಶೋಧದ ವೇಳೆ ದೊರೆತ ವರ್ಗೀಕೃತ ಸರ್ಕಾರಿ ದಾಖಲೆಗಳ ಪಟ್ಟಿಯನ್ನು ಸೇರ್ಪಡೆಯಾಗಿವೆ. ಈಗ ದೊರೆತ ಕ್ಲಾಸಿಫೈಡ್ ದಾಖಲೆಗಳು ಎಷ್ಟು ಮುಖ್ಯವಾಗಿವೇ, ಇದರಿಂದ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ Fact Check | ಮಗುವಿನ ಜತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅನುಚಿತವಾಗಿ ವರ್ತಿಸಿದ್ರಾ? ಸತ್ಯ ಸಂಗತಿ ಏನು?

ಎಫ್‌ಬಿಐ ಈ ಹಿಂದೆ, ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಿವಾಸದಲ್ಲಿ ಶೋಧ ಮಾಡಿತ್ತು. ಆಗಲೂ ಸಾವಿರಾರು ಪುಟಗಳಷ್ಟು ಸರ್ಕಾರಿ ದಾಖಲೆಗಳು ದೊರೆತಿದ್ದವು. ಈ ವೇಳೆ, ಎಫ್‌ಬಿಐ ಸರ್ಚ್ ವಾರಂಟ್ ಹೊಂದಿತ್ತು. ಅಮೆರಿಕ ದ ಕಾನೂನು ಪ್ರಕಾರ, ಯಾವುದೇ ಸರ್ಕಾರಿ ದಾಖಲೆಗಳನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಒಂದೊಮ್ಮೆ ಇದ್ದರೆ ಅವುಗಳನ್ನು ಹಿಂದಿರುಗಿಸಬೇಕು. ಆ ದಾಖಲೆಗಳನ್ನು ನಾಷ್ಯನಲ್ ಆರ್ಚೀವ್‍‌ಗೆ ದಾಖಲಾಗುತ್ತವೆ.

Exit mobile version