ವಾಷಿಂಗ್ಟನ್: ಅಮೆರಿಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸುವ ಹುಚ್ಚಾಟ ಮುಂದುವರಿದಿದ್ದು, ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ಒಬ್ಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಒಬ್ಬ ಪೊಲೀಸ್ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದು, ಇತರ ಮೂವರು ಸಾರ್ವಜನಿಕರೂ ಆಸ್ಪತ್ರೆ ಸೇರಿದ್ದಾರೆ. ಶ್ವೇತ ಭವನದಿಂದ ಕೇವಲ ಎರಡು ಕಿ.ಮೀ ದೂರದಲ್ಲಿರುವ ಸಭಾಂಗಣದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ಜೂನ್ 19ನ್ನು ಜೀತವಿಮುಕ್ತಿ ದಿನವನ್ನಾಗಿ ಆಚರಿಸಲಾಗುತ್ತದೆ. ಅದರ ಭಾಗವಾಗಿ ಇಲ್ಲಿ ಮೋಷೆಲ್ಲಾ ಎಂಬ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಎರಡು ತಂಡಗಳ ನಡುವೆ ವಿವಾದ ಏರ್ಪಟ್ಟು ಅದು ಗುಂಡಿನ ದಾಳಿಗೆ ಕಾರಣವಾಗಿದೆ. ಪೊಲೀಸರು ಒಂದೆರಡು ಬಾರಿ ಈ ಜಗಳನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ, ಕೊನೆಗೆ ಅದು ವಿಕೋಪಕ್ಕೆ ಹೋಗಿ ಜೀವ ಬಲಿ ಪಡೆಯಿತು.
ನಿರಂತರ ದಾಳಿ
ಕೆಲವೇ ದಿನಗಳ ಹಿಂದೆ ಅಲ್ಬಾಮಾದ ವೆಸ್ಟಾ ವಿಯಾ ಹಿಲ್ಸ್‌ನಲ್ಲಿರುವ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆದು ಇಬ್ಬರು ಮೃತಪಟ್ಟಿದ್ದರು. ಜೂನ್ ೫ರಂದು ರೆಸ್ಟೋರೆಂಟ್ ಒಂದರ ಎದುರು ನಡೆದ ದಾಳಿಯಲ್ಲಿ ೧೪ ಮಂದಿ ಗಾಯಗೊಂಡಿದ್ದರು. ಜೂನ್ ನಾಲ್ಕರಂದು ಫಿಲಡೆಲ್ಫಿಯಾದಲ್ಲಿ ನಡೆದ ಗನ್ ಫೈರ್ ಮೂವರನ್ನು ಬಲಿ ಪಡೆದಿತ್ತು. ಇದನ್ನೂ ಓದಿ| ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿಗೆ 2 ಸಾವು, 4 ಮಂದಿಗೆ ಗಾಯ