ಪಾಕಿಸ್ತಾನದ ಕರಾಚಿಯಲ್ಲಿ ತೆಹ್ರೀಕ್ ಇ ತಾಲಿಬಾನ್(ಪಾಕಿಸ್ತಾನ್) ಉಗ್ರಸಂಘಟನೆಯ ಐವರು ಉಗ್ರರನ್ನು ಹತ್ಯೆಗೈಯಲ್ಲಾಗಿದೆ. ಕರಾಚಿ ಪೊಲೀಸ್ ಮುಖ್ಯಸ್ಥನ ಕಚೇರಿಯನ್ನು (Karachi police chief’s office)ಈ ಟಿಟಿಪಿ ಭಯೋತ್ಪಾದಕರು ವಶಕ್ಕೆ ಪಡೆದುಕೊಂಡಿದ್ದರು. ಹೀಗೆ ಅತಿಕ್ರಮಿಸಿಕೊಂಡ ಉಗ್ರರನ್ನು ಹೆಮ್ಮಟ್ಟಿಸಲು ಪಾಕಿಸ್ತಾನ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತ್ತು. ಅದರಲ್ಲೀಗ ಐವರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ.
ಕರಾಚಿಯಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿ ಐದು ಅಂತಸ್ತಿನ ಕಟ್ಟಡವಾಗಿದೆ. ಇಲ್ಲಿ ಅಡಗಿದ್ದ ಟಿಟಿಪಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿದ್ದವು. ಶುಕ್ರವಾರ ರಾತ್ರಿ 10.50ರ ಹೊತ್ತಿಗೆ ಕಾರ್ಯಾಚರಣೆ ಅಂತಿಮಗೊಂಡಿದೆ. ಹಾಗೇ, ಐವರು ಉಗ್ರರ ಜತೆಗೆ, ಒಬ್ಬ ರೇಂಜರ್ಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಕೂಡ ಜೀವ ಕಳೆದುಕೊಂಡಿದ್ದಾರೆ. ಭದ್ರತಾ ಪಡೆ ಸಿಬ್ಬಂದಿಯ ದಾಳಿಗೆ ಪ್ರತಿಯಾಗಿ ಉಗ್ರರೂ ಕೂಡ ತೀಕ್ಷ್ಣ ಪ್ರತಿರೋಧ ಒಡ್ಡಿದ್ದರು. ಒಟ್ಟಾರೆ 17 ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Viral Video: ಪಾಕಿಸ್ತಾನವನ್ನೇ ಪುಡಿಗಟ್ಟುತ್ತಿದ್ದಾರೆ ಭಯೋತ್ಪಾದಕರು; ಕರಾಚಿ ಮಸೀದಿಯ ಮೇಲೆ ಹತ್ತಿ ಮಿನಾರ್ಗಳ ಧ್ವಂಸ
ಶುಕ್ರವಾರ ಸಂಜೆ 7ಗಂಟೆಹೊತ್ತಿಗೆ ಉಗ್ರರು ಕರಾಚಿಯ ಪೊಲೀಸ್ ಮುಖ್ಯಸ್ಥರ ಕಚೇರಿಯನ್ನು ಅತಿಕ್ರಮಿಸಿಕೊಂಡಿದ್ದರು. ಗನ್ ಮತ್ತು ಬಾಂಬ್ಗಳ ಮೂಲಕ ಆ ಪ್ರದೇಶದಲ್ಲಿ ದಾಳಿ ನಡೆಸಿದ್ದರು. ಅದರಲ್ಲೊಬ್ಬ ಉಗ್ರ ಪೊಲೀಸ್ ಮುಖ್ಯಸ್ಥರ ಕಚೇರಿಯ 4ನೇ ಮಹಡಿಗೆ ಹೋಗಿ, ಅಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಈ ಘಟನೆಯಲ್ಲಿ ಇಬ್ಬರು ಉಗ್ರರು ಮತ್ತು ಒಬ್ಬ ಪೊಲೀಸ್ ಅಧಿಕಾರಿಗ ಮೃತಪಟ್ಟು 11 ಮಂದಿ ಗಾಯಗೊಂಡಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.