ಬೀಜಿಂಗ್: ಚೀನಾದ ಮಾಜಿ ಪ್ರಧಾನಿ (Former Premier), ದೇಶದ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರೆನಿಸಿದ್ದ ಲೀ ಕೆಕಿಯಾಂಗ್ (Li Keqiang) (68) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಶಾಂಘೈನಲ್ಲಿ ಗುರುವಾರ (ಅಕ್ಟೋಬರ್ 26) ಲೀ ಕೆಕಿಯಾಂಗ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಶುಕ್ರವಾರ ಬೆಳಗಿನ ಜಾವ ಅವರು ಮೃತಪಟ್ಟಿದ್ದಾರೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಲೀ ಕೆಕಿಯಾಂಗ್ ಅವರು 2013-23ರವರೆಗೆ ಚೀನಾದ ಪ್ರಧಾನಿಯಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಇವರ ಅಧಿಕಾರದ ಅವಧಿ ಮುಗಿತ್ತು. ಕ್ಸಿ ಜಿನ್‌ಪಿಂಗ್ ಅವರು ತಮ್ಮ ಅಧಿಕಾರ ಭದ್ರಗೊಳಿಸುವ ಹಾಗೂ ಆರ್ಥಿಕ ಮತ್ತು ಸಮಾಜಿಕ ವಲಯದಲ್ಲಿ ಪ್ರಬಲ ಅಧಿಕಾರ ಹೊಂದಿದ ಬಳಿ ಲೀ ಕೆಕಿಯಾಂಗ್ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಇವರು ಆರ್ಥಿಕ ತಜ್ಞರೂ ಆಗಿದ್ದು, ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವು ಆರ್ಥಿಕ ಸುಧಾರಣೆಗಳಿಗೂ ಮುನ್ನುಡಿ ಬರೆದಿದ್ದರು.
China's former Premier Li Keqiang died of a heart attack on Friday, just 10 months after retiring from a decade in office. He was 68: Reuters
— ANI (@ANI) October 27, 2023
ಆರ್ಥಿಕ ಸುಧಾರಣೆಗಳು, ದಕ್ಷ ಆಡಳಿತ, ಸ್ಫುಟ ಇಂಗ್ಲಿಷ್‌ನಿಂದಲೇ ಲೀ ಕೆಕಿಯಾಂಗ್ ಅವರು ದೇಶದ ಗಮನ ಸೆಳೆದಿದ್ದರು. ಹು ಜಿಂಟಾವೋ ಅವರು ಚೀನಾ ಅಧ್ಯಕ್ಷರಾಗಿದ್ದಾಗ ಅವರಿಗೆ ಲೀ ಕೆಕಿಯಾಂಗ್ ಆಪ್ತರಾಗಿದ್ದರು. ಕ್ಸಿ ಜಿನ್‌ಪಿಂಗ್ ಅಧ್ಯಕ್ಷರಾದ ಬಳಿಕ ಇದೇ ಕಾರಣಕ್ಕಾಗಿ ಲೀ ಕೆಕಿಯಾಂಗ್ ಹಾಗೂ ಕ್ಸಿ ಜಿನ್‌ಪಿಂಗ್ ಮಧ್ಯೆ ಬಿಕ್ಕಟ್ಟು ಉಂಟಾಗಿತ್ತು ಎಂದೇ ಹೇಳಲಾಗಿತ್ತು. ಲೀ ಕೆಕಿಯಾಂಗ್ ಅಧಿಕಾರದ ಅವಧಿ ಮುಗಿಯುತ್ತಲೇ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಆಪ್ತ ಲೀ ಕಿಯಾಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದರು.
ಇದನ್ನೂ ಓದಿ: ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ; ಪಿಎಂ ಮೋದಿ ಸಂತಾಪ
ಬೇರೆ ದೇಶಗಳೊಂದಿಗೆ ಉತ್ತಮ ಸಂಬಂಧ, ವ್ಯಾಪಾರ ವೃದ್ಧಿ, ಯುವ ಸಮೂಹವು ಉದ್ಯಮದಲ್ಲಿ ತೊಡಗುವುದು, ಆರ್ಥಿಕ ಉದಾರವಾದ ಸೇರಿ ಹಲವು ಸುಧಾರಣೆಗಳಿಗೆ ಲೀ ಕೆಕಿಯಾಂಗ್ ನಾಂದಿ ಹಾಡಿದ್ದರು. ಇವರ ನಿಧನಕ್ಕೆ ಚೀನಾದ ಗಣ್ಯರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಆರೋಗ್ಯ ಯೋಜನೆ ಹಗರಣ, ಹಲವು ವಿವಾದಾತ್ಮಕ ಹೇಳಿಕೆಗಳು ಲೀ ಕೆಕಿಯಾಂಗ್ ಅವರನ್ನು ವಿವಾದದ ಸುಳಿಗೂ ಸಿಲುಕಿಸಿದ್ದವು.