ಜೂ.27ರಿಂದ ಫ್ರಾನ್ಸ್ನಲ್ಲಿ ತೀವ್ರತರ ಗಲಭೆ (France Riots) ಶುರುವಾಗಿದೆ. ಯದ್ವಾತದ್ವಾ ವಾಹನ ಚಲಾಯಿಸಿಕೊಂಡು ಬಂದ 17ವರ್ಷದ ಹುಡುಗನನ್ನು ಟ್ರಾಫಿಕ್ ಪೊಲೀಸ್ ಒಬ್ಬರು ತಡೆಯಲು ಯತ್ನಿಸಿದ್ದಾರೆ. ಆತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದ. ರೆಡ್ಲೈಟ್ ಇದ್ದರೂ ಬೇಕಾಬಿಟ್ಟಿ ಗಾಡಿ ಓಡಿಸಿಕೊಂಡು ಹೋಗುತ್ತಿದ್ದ. ಅವನನ್ನು ನಿಯಂತ್ರಿಸುವ ಪ್ರಯತ್ನ ಕೈಗೂಡದೆ ಇದ್ದಾಗ ಆ ಹುಡುಗನಿಗೆ ಶೂಟ್ ಮಾಡಿದ್ದಾರೆ. ಪೊಲೀಸ್ ಗುಂಡಿಗೆ ಹುಡುಗ ನಹೇಲ್ ಮೃತಪಟ್ಟಿದ್ದಾನೆ. ಈ ಮುಸ್ಲಿಂ ಯುವಕನ ಹತ್ಯೆಯ ಬೆನ್ನಲ್ಲೇ ಫ್ರಾನ್ಸ್ನಲ್ಲಿ ಹಿಂಸಾಚಾರ ಶುರುವಾಗಿದ್ದು, ದಂಗೆಕೋರರು ವಿಪರೀತ ಹಾನಿ ಮಾಡುತ್ತಿದ್ದಾರೆ. ಗುಂಡು ಹಾರಿಸಿದ ಪೊಲೀಸ್ ಕ್ಷಮೆ ಯಾಚಿಸಿದ್ದಾರೆ. ಅವರ ವಿರುದ್ಧ ಕೂಡ ಕಾನೂನು ಕ್ರಮ ಜರುಗಿಸಲಾಗಿದೆ. ಆದರೆ ಹಿಂಸಾಚಾರ ಮಾತ್ರ ನಿಲ್ಲುತ್ತಿಲ್ಲ. ಗಲಭೆಯಲ್ಲಿ ಪಾಲ್ಗೊಂಡು ಸುಮಾರು 719 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಗಲಭೆಕೋರರು ಅಂಗಡಿ-ಮುಂಗಟ್ಟುಗಳನ್ನೆಲ್ಲ ಧ್ವಂಸ ಮಾಡುತ್ತಿದ್ದಾರೆ. ಐಷಾರಾಮಿ, ದುಬಾರಿ ಬೆಲೆಯ ಹ್ಯಾಂಡ್ಬ್ಯಾಗ್ ಕಂಪನಿ ಲೂಯಿಸ್ ವಿಟ್ಟಾನ್, ಬಟ್ಟೆ ಮತ್ತು ಬ್ಯಾಗ್ ಬ್ರ್ಯಾಂಡ್ ಝಾರಾ, ಶೂ ಬ್ರ್ಯಾಂಡ್ ನೈಕ್, ಆ್ಯಪಲ್ ಫೋನ್ ಶಾಪ್ಗಳನ್ನು ದೋಚುತ್ತಿದ್ದಾರೆ. ಇಡೀ ಮಳಿಗೆಗಳಲ್ಲಿ ಇದ್ದಿದ್ದನ್ನೆಲ್ಲ ಹೊತ್ತೊಯ್ಯುತ್ತಿದ್ದಾರೆ. ಈ ಬಗ್ಗೆ ಫ್ರಾನ್ಸ್ ಜನರು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: France Riots: ಫ್ರಾನ್ಸ್ ದಂಗೆಗೆ ವಿಡಿಯೋ ಗೇಮ್ಸ್ ಕಾರಣ! ಮಕ್ಕಳನ್ನು ಬೀದಿಗೆ ಬೀಡಬೇಡಿ ಅಂದ್ರು ಫ್ರೆಂಚ್ ಅಧ್ಯಕ್ಷರು
ಈ ಮಧ್ಯೆ ಶನಿವಾರ ರಾತ್ರಿ ಪ್ಯಾರಿಸ್ನ ಪಟ್ಟಣವೊಂದರ ಮೇಯರ್ ವಿನ್ಸೆಂಟ್ ಜೀನ್ಬ್ರನ್ ಎಂಬುವರ ಮನೆಗೆ ಪ್ರತಿಭಟನಾಕಾರರು ಕಾರನ್ನು ಡಿಕ್ಕಿಹೊಡೆಸಿದ್ದಾರೆ. ಈ ವೇಳೆ ಮೇಯರ್ ಪತ್ನಿ ಮತ್ತು ಮಗುವಿಗೆ ಗಾಯವಾಗಿದೆ. ತಮ್ಮ ಮನೆಗೆ ಬೆಂಕಿ ಹಾಕಲು ಯತ್ನಿಸಿದರು. ಅದಕ್ಕೂ ಮೊದಲು ಹೀಗೆ ಕಾರನ್ನು ಡಿಕ್ಕಿ ಹೊಡೆಸಿದರು. ಇದು ಕೊಲೆ ಯತ್ನ ಎಂದು ಮೇಯರ್ ಹೇಳಿದ್ದಾರೆ. ಫ್ರಾನ್ಸ್ ದೇಶಾದ್ಯಂತ ನಡೆಯುತ್ತಿರುವ ಈ ಗಲಭೆ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಸುಮಾರು 45 ಭದ್ರತಾ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ. ಗಲಭೆ ನಿಯಂತ್ರಿಸಲು ಅಲ್ಲಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.