Site icon Vistara News

France Terrorist Attack: ಫ್ರಾನ್ಸ್‌ನಲ್ಲೂ ಇಸ್ಲಾಮಿಸ್ಟ್‌ ದಾಳಿ, ಶಿಕ್ಷಕನ ಹತ್ಯೆ, ಸೈನಿಕರ ನಿಯೋಜನೆ

France terrorist attack

ಪ್ಯಾರಿಸ್‌: ಫ್ರಾನ್ಸ್‌ನಲ್ಲಿ ಇಸ್ಲಾಮಿಕ್‌ ಭಯೋತ್ಪಾದಕನೊಬ್ಬ ದಾಳಿ (France terrorist attack) ನಡೆಸಿದ ಶಿಕ್ಷಕರೊಬ್ಬರನ್ನು ಕೊಂದು ಇತರ ಮೂವರನ್ನು ಗಾಯಗೊಳಿಸಿದ್ದಾನೆ. ಈ ಘಟನೆಯ ಬಳಿಕ ದೇಶದಾದ್ಯಂತ ಹೆಚ್ಚಿನ ಬಿಗಿ ಭದ್ರತೆ ಹಾಕಲಾಗಿದ್ದು, 7,000 ಸೈನಿಕರನ್ನು ನಿಯೋಜಿಸಲಾಗಿದೆ.

ದೇಶದ ಈಶಾನ್ಯ ಪಟ್ಟಣವಾದ ಅರಾಸ್‌ನಲ್ಲಿರುವ ಶಾಲೆಯೊಂದರಲ್ಲಿ ಚೆಚೆನ್ ಮೂಲದ ವ್ಯಕ್ತಿಯೊಬ್ಬ ಶಿಕ್ಷಕನನ್ನು ಮಾರಣಾಂತಿಕವಾಗಿ ಇರಿದು ಇತರ ಮೂವರು ವಯಸ್ಕರನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಈ ದಾಳಿಯನ್ನು “ಇಸ್ಲಾಮಿಸ್ಟ್ ಭಯೋತ್ಪಾದನೆಯ ಕೃತ್ಯʼ ಎಂದು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕರೆದಿದ್ದು, ತೀವ್ರವಾಗಿ ಖಂಡಿಸಿದ್ದಾರೆ.

ಅರಾಸ್‌ ಪಟ್ಟಣ ಸಾಕಷ್ಟು ಸಂಖ್ಯೆಯ ಯಹೂದಿ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಘಟನೆಯ ಬಳಿಕ ದೇಶದಲ್ಲಿ 7,000 ಸೈನಿಕರನ್ನು ನಿಯೋಜಿಸಲಾಗಿದೆ. ಇಸ್ರೇಲ್‌ನಲ್ಲಿ ನಡೆದ ಹಮಾಸ್‌ ದಾಳಿಗಳ ಬಳಿಕ ಭಯೋತ್ಪಾದನೆಯ ಕುರಿತ ಮತ್ತಷ್ಟು ಕಟ್ಟೆಚ್ಚರ ತಾಳಲಾಗಿದೆ. ಮತ್ತೊಂದು ಪ್ರದೇಶದಲ್ಲಿ ನಡೆದ ಪ್ರತ್ಯೇಕ ದಾಳಿಯ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಮ್ಯಾಕ್ರನ್ ಹೇಳಿದ್ದಾರೆ.

“ಈ ಶಾಲೆಯು ಅನಾಗರಿಕ ಇಸ್ಲಾಮಿ ಭಯೋತ್ಪಾದನೆಯಿಂದ ಆಘಾತ ಅನುಭವಿಸಿದೆ. ದಾಳಿಕೋರನನ್ನು ತಡೆಯುವ ಪ್ರಯತ್ನಕ್ಕೆ ಮುಂದಾದ ಶಿಕ್ಷಕ ಬಹುಶಃ ಅನೇಕ ಜೀವಗಳನ್ನು ಉಳಿಸಿ ತಾವು ಜೀವತ್ಯಾಗ ಮಾಡಿದ್ದಾರೆ” ಎಂದು ಶಾಲೆಗೆ ಭೇಟಿ ನೀಡಿದ ನಂತರ ಮ್ಯಾಕ್ರನ್ ಹೇಳಿದರು.

20ರ ಹರೆಯದ ಮೊಹಮ್ಮದ್ ಮೊಗುಚ್ಕೋವ್ ಎಂಬ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಮೊಗುಚ್ಕೋವ್ ಮುಸ್ಲಿಮರು ಹೆಚ್ಚಿರುವ ರಷ್ಯಾದ ದಕ್ಷಿಣ ಕಾಕಸಸ್ ಪ್ರದೇಶವಾದ ಚೆಚೆನ್ಯಾದಿಂದ ಬಂದಾತ. ಈತ ಈಗಾಗಲೇ “ಫಿಚೆ ಎಸ್” ಎಂದು ಕರೆಯಲ್ಪಡುವ ಫ್ರೆಂಚ್ ಅಪರಾಧ ದಾಖಲೆಯಲ್ಲಿದ್ದಾತ. ಫ್ರಾನ್ಸ್‌ನ ಆಂತರಿಕ ಗುಪ್ತಚರ ಸಂಸ್ಥೆ DGSIಯ ಎಲೆಕ್ಟ್ರಾನಿಕ್ ಮತ್ತು ಭೌತಿಕ ಕಣ್ಗಾವಲು ಅಡಿಯಲ್ಲಿ ಈತನಿದ್ದ. ʼಮೊಗುಚ್ಕೋವ್ʼ ಎಂಬುದು “ಅಲ್ಲಾಹು ಅಕ್ಬರ್” ಎಂಬ ಅರೇಬಿಕ್ ನುಡಿಗಟ್ಟಿನ ರಷ್ಯನ್‌ ರೂಪವಾಗಿದೆ.

ಇದನ್ನೂ ಓದಿ: Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

Exit mobile version