Site icon Vistara News

Giorgia Meloni: ಮೋದಿ ಜತೆಗಿನ ವಿಡಿಯೊ ಟ್ರೋಲ್‌ ಬೆನ್ನಲ್ಲೇ ಇಟಲಿ ಪ್ರಧಾನಿ ಮೆಲೋನಿ‌ ಬ್ರೇಕಪ್!

italy

italy

ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italy PM Giorgia Meloni) ತಮ್ಮ ಸಂಗಾತಿ ಆ್ಯಂಡ್ರಿಯಾ ಗಿಯಾಂಬ್ರುನೊ (Andrea Giambruno) ಜತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಶುಕ್ರವಾರ ಬರೆದುಕೊಂಡಿದ್ದಾರೆ.

ಪತ್ರಕರ್ತ ಗಿಯಾಂಬ್ರುನೊ ಜತೆ ಮೆಲೋನಿ ಸುಮಾರು 10 ವರ್ಷ ಸಂಬಂಧ ಹೊಂದಿದ್ದರು. ʼʼಆ್ಯಂಡ್ರಿಯಾ ಗಿಯಾಂಬ್ರುನೊ ಜತೆಗಿನ 10 ವರ್ಷಗಳ ಸಂಬಂಧ ಇಲ್ಲಿಗೆ ಕೊನೆಯಾಗುತ್ತಿದೆ. ನಮ್ಮ ದಾರಿ ಬೇರೆ ಬೇರೆ ಎನ್ನುವುದು ಈಗ ಗಮನಕ್ಕೆ ಬಂದಿದೆ. ಹೀಗಾಗಿ ಬೇರ್ಪಡುತ್ತಿದ್ದೇವೆʼʼ ಎಂದು ಅವರು ಹೇಳಿದ್ದಾರೆ. ಈ ಜೋಡಿಗೆ 7ರ ಹರೆಯದ ಪುತ್ರಿ ಕೂಡ ಇದ್ದಾಳೆ.

ದಿ. ಸಿಲ್ವಿಯೊ ಬೆರ್ಲುಸ್ಕೋನಿ ಅವರ ಉತ್ತರಾಧಿಕಾರಿಗಳ ಒಡೆತನದ ಎಂಎಫ್ಇ ಮಾಧ್ಯಮ ಗುಂಪಿನ ಭಾಗವಾದ ಮೀಡಿಯಾಸೆಟ್ ಪ್ರಸಾರ ಮಾಡಿದ ಸುದ್ದಿ ಕಾರ್ಯಕ್ರಮದ ನಿರೂಪಕ ಗಿಯಾಂಬ್ರುನೊ. ಈ ವಾರದ ಆರಂಭದಲ್ಲಿ ಜಿಯಾಂಬ್ರುನೊ ಅವರ ಕಾರ್ಯಕ್ರಮದ ಆಯ್ದ ಭಾಗಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಅವರು ಕೆಟ್ಟ ಭಾಷೆಯನ್ನು ಬಳಸಿರುವುದು ಕಂಡು ಬಂದಿದೆ. ಇದರಿಂದಾಗಿ ಮೆಲೋನಿ ತಮ್ಮ ಸಂಬಂಧಕ್ಕೆ ಕೊನೆ ಹಾಡುತ್ತಿದ್ದಾರೆ ಎನ್ನಲಾಗಿದೆ.

ಗಿಯಾಂಬ್ರುನೊ ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಬಲಿಪಶುವನ್ನು ದೂಷಿಸುವ ಕಮೆಂಟ್‌ ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. “ನೀವು ಅತಿಯಾಗಿ ಮದ್ಯ ಸೇವಿಸಿ ಪ್ರಜ್ಞೆ ಕಳೆದುಕೊಳ್ಳವುದನ್ನು ತಪ್ಪಿಸಿದರೆ ಅತ್ಯಾಚಾರದಂತಹ ಘಟನೆ ನಡೆಯುವುದಿಲ್ಲ” ಎಂಬ ಅರ್ಥದಲ್ಲಿ ಅವರು ಅಂದು ಮಾತನಾಡಿದ್ದರು.

ಅವರ ಹೇಳಿಕೆ ಸಾರ್ವಜನಿಕರಿಂದ ಮತ್ತು ರಾಜಕಾರಣಿಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಅದಕ್ಕೆ ಜಿಯಾಂಬ್ರುನೊ ಪ್ರತಿಕ್ರಿಯಿಸಿ, ʼʼಅತ್ಯಾಚಾರದ ಕೃತ್ಯವನ್ನು ಸಮರ್ಥಿಸುವುದಿಲ್ಲ. ಅದನ್ನು ‘ಶೋಚನೀಯ’ ಎಂದು ಕರೆದಿದ್ದೇನೆ ಮತ್ತು ಅತ್ಯಾಚಾರಿಗಳನ್ನು ‘ಮೃಗಗಳು’ ಎಂದು ಬಣ್ಣಿಸಿದ್ದೇನೆʼʼ ಎಂದು ಹೇಳಿದ್ದರು. ʼʼಕುಡಿದು ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು ಪುರುಷರಿಗೆ ನ್ಯಾಯಸಮ್ಮತ ಎಂದು ನಾನು ಎಂದಿಗೂ ಹೇಳಿಲ್ಲʼʼ ಎಂದು ಅವರು ಬಳಿಕ ಸ್ಪಷ್ಟಪಡಿಸಿದ್ದರು.

ʼʼಗಿಯಾಂಬ್ರುನೊ ಜತೆಗೆ ಉತ್ತಮ ದಿನಗಳನ್ನು ಕಳೆದಿದ್ದೇನೆ. ಅದಕ್ಕಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ. ಪುತ್ರಿ ನನಗೆ ಆತನಿಂದ ಲಭಿಸಿದ ಅತೀ ಅಮೂಲ್ಯ ಉಡುಗೊರೆ. ಈ ಎಲ್ಲಾ ಕಾರಣಕ್ಕೆ ಗಿಯಾಂಬ್ರುನೊಗೆ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ಮೆಲೋನಿ ಬರೆದುಕೊಂಡಿದ್ದಾರೆ.

ಮೋದಿ ಜತೆಗಿನ ವಿಡಿಯೊ ಟ್ರೋಲ್

ಮೋದಿಯನ್ನು ಹೊಗಳಿದ್ದ ಮೆಲೋನಿ

ಮೆಲೋನಿ ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಸುದ್ದಿಯಾಗಿದ್ದರು. “ಜಾಗತಿಕ ನಾಯಕರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಪ್ರೀತಿಪಾತ್ರರು” ಎಂದು ಮಾರ್ಚ್‌ನಲ್ಲಿ ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಮೆಲೋನಿ ಹೇಳಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಟ್ರೋಲಿಗರು ಮೋದಿ ಮತ್ತು ಮೆಲೋನಿ ಕುರಿತಾದ ಟ್ರೋಲ್‌ಗಳನ್ನು ಹರಿಯಬಿಟ್ಟಿದ್ದು, ಭರ್ಜರಿಯಾಗಿ ಸದ್ದು ಮಾಡಿದ್ದವು.

Exit mobile version