ಕೆನಡಾ ಸರ್ಕಾರ ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 25 ಜನರ ಹೆಸರು ಈ ಪಟ್ಟಿಯಲ್ಲಿ ಇದ್ದು, ಅದರಲ್ಲಿ ಸತಿಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ (Goldy Brar) ಹೆಸರೂ ಇದೆ. 2022ರ ಮೇ 29ರಂದು ನಡೆದಿದ್ದ ಪಂಜಾಬ್ ಗಾಯಕ ಸಿಧು ಮೂಸೇವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಈ ಗೋಲ್ಡಿ ಬ್ರಾರ್. ಹೀಗೆ ಕಾನೂನು ವಿರೋಧಿ ಕೆಲಸ ಮಾಡಿ ನಾಪತ್ತೆಯಾದವರನ್ನು ಹುಡುಕುವ ಕಾರ್ಯಾಚರಣೆಗೆ ಕೆನಡಾ ಸರ್ಕಾರ BOLO (Be On Lookout) ಎಂದು ಹೆಸರಿಟ್ಟಿದೆ. ಈ ಬೋಲೋ ಅಡಿಯಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 15ನೇ ಕ್ರಮಾಂಕದಲ್ಲಿ ಗೋಲ್ಡಿ ಬ್ರಾರ್ ಹೆಸರಿದೆ. ಈತನ ಬಗ್ಗೆ ಸುಳಿವು ಕೊಟ್ಟವರಿಗೆ 1.5 ಕೋಟಿ ರೂ. ನೀಡುವುದಾಗಿಯೂ ತಿಳಿಸಿದೆ.
ಪಂಜಾಬಿ ಗಾಯಕನಾಗಿದ್ದ ಸಿಧು ಮೂಸೇವಾಲಾನನ್ನು ಅಲ್ಲಿನ ಮಾನ್ಸಾ ಜಿಲ್ಲೆಯಲ್ಲಿ ಶೂಟ್ ಮಾಡಿ ಕೊಲ್ಲಲಾಗಿತ್ತು. ಇದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಕೃತ್ಯವೆಂದು ಸಾಬೀತಾಗಿತ್ತು. ಲಾರೆನ್ಸ್ ಬಿಷ್ಣೋಯಿ ಜೈಲಲ್ಲಿ ಇದ್ದುಕೊಂಡೇ ಮೂಸೇವಾಲಾ ಹತ್ಯೆಗೆ ಸಂಚು ರೂಪಿಸಿದ್ದ. ಅದಕ್ಕೆ ಗೋಲ್ಡಿ ಬ್ರಾರ್ ಸಾಥ್ ಕೊಟ್ಟಿದ್ದ. ಇವನನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಯುಎಸ್ನಲ್ಲಿ ಬಂಧಿಸಲಾಗಿದೆ ಎಂದು ಒಮ್ಮೆ ಸುದ್ದಿಯಾಗಿತ್ತಾದರೂ ಅದು ನಿಜವಲ್ಲ ಎಂಬುದು ಬಳಿಕ ಗೊತ್ತಾಗಿತ್ತು.
ಇದನ್ನೂ ಓದಿ: Moosewala murder: ಗೋಲ್ಡಿ ಬ್ರಾರ್ ಗಡಿಪಾರು ಮಾಡುವಂತೆ ಕೆನಡಾಕ್ಕೆ ಭಾರತ ಮನವಿ
2017ರಲ್ಲಿ ವಿದ್ಯಾರ್ಥಿಯಾಗಿ ಗೋಲ್ಡಿ ಬ್ರಾರ್ ಕೆನಡಾಕ್ಕೆ ಕಾಲಿಟ್ಟವನು ಅದನ್ನೇ ಕಾಯಂ ವಾಸಸ್ಥಾನ ಮಾಡಿಕೊಂಡ. ಆ ದೇಶದಲ್ಲೇ ಇದ್ದುಕೊಂಡು ಭಾರತದಲ್ಲಿ ಹಲವು ಕುಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಅವನ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಅವನನ್ನು ಗಡಿಪಾರು ಮಾಡುವಂತೆ ಈ ಹಿಂದ ಭಾರತ ಸರ್ಕಾರ ಕೆನಡಾಕ್ಕೆ ಮನವಿ ಮಾಡಿತ್ತು.