ವಾಷಿಂಗ್ಟನ್ ಡಿಸಿ: ಅಮೆರಿಕದ ಮೈನ್ ಪ್ರದೇಶದ ಲೆವಿಸ್ಟನ್ ಎಂಬಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ (mass shooting, Gun Violence) ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ, ಸುಮಾರು 60 ಜನರು ಗಾಯಗೊಂಡಿದ್ದಾರೆ.
ಈ ಘಟನೆ ಬುಧವಾರ ತಡರಾತ್ರಿ (ಯುಎಸ್ ಸ್ಥಳೀಯ ಕಾಲಮಾನ) ನಡೆದಿದೆ. ಆರೋಪಿ ಇನ್ನೂ ಸೆರೆಸಿಕ್ಕಿಲ್ಲ. ಆಂಡ್ರೊಸ್ಕೊಗಿನ್ ಕೌಂಟಿ ಶೆರೀಫ್ ಕಚೇರಿಯು ಶಂಕಿತ ದಾಳಿಕೋರನ ಎರಡು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದೆ. ಗುಂಡಿನ ದಾಳಿಯ ಸ್ಥಳದಲ್ಲಿ ಇದನ್ನು ತೆಗೆಯಲಾಗಿದ್ದು, ರೈಫಲ್ ಹಿಡಿದಿರುವುದು ಕಂಡುಬಂದಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.
CNN ಮತ್ತು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಾರ ಮೈನ್‌ನಲ್ಲಿ (maine shooting) ಸಾವಿನ ಸಂಖ್ಯೆ 16. ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಒಂದು ಬೌಲಿಂಗ್ ಅಲ್ಲೇ ಮತ್ತು ಇನ್ನೊಂದು ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಅಧಿಕಾರಿಗಳು ಚಿತ್ರದಲ್ಲಿರುವ ಶಂಕಿತನನ್ನು ಗುರುತಿಸಲು ಸಾರ್ವಜನಿಕರ ಸಹಾಯ ಕೇಳಿದ್ದಾರೆ. ಲೆವಿಸ್ಟನ್‌ನಲ್ಲಿರುವ ಸೆಂಟ್ರಲ್ ಮೈನೆ ವೈದ್ಯಕೀಯ ಕೇಂದ್ರ ದಾಳಿಯಲ್ಲಿ ಗಾಯಗೊಂಡವರನ್ನು ಕರೆದೊಯ್ಯಲು ಪ್ರದೇಶದ ಆಸ್ಪತ್ರೆಗಳೊಂದಿಗೆ ಸಂವಹನ ನಡೆಸುತ್ತಿದೆ.
ಸ್ಟೇಟ್ ಪೊಲೀಸರು ಶೂಟರ್‌ನ ಪತ್ತೆಗೆ ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಸಾರ್ವಜನಿಕರಿಗೆ ಸಕ್ರಿಯ ಶೂಟರ್ ಪರಿಸ್ಥಿತಿಯ ಮಾಹಿತಿ ನೀಡಿ ನಿವಾಸಿಗಳು ಮನೆಯೊಳಗೆ ಇರುವಂತೆ ಸೂಚಿಸಿದ್ದಾರೆ. ಲೆವಿಸ್ಟನ್, ಮೈನೆ ಸ್ಟೇಟ್‌ನ ಆಂಡ್ರೊಸ್ಕೋಗ್ಗಿನ್ ಕೌಂಟಿಯ ಭಾಗವಾಗಿದ್ದು, ಎರಡನೇ ಅತಿದೊಡ್ಡ ನಗರವಾಗಿದೆ. ಅತಿ ದೊಡ್ಡ ನಗರವಾದ ಪೋರ್ಟ್‌ಲ್ಯಾಂಡ್‌ನ ಉತ್ತರಕ್ಕೆ ಸುಮಾರು 35 ಮೈಲು ದೂರದಲ್ಲಿದೆ. ಘಟನೆಯ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಅವರಿಗೂ ಮಾಹಿತಿ ನೀಡಲಾಗಿದೆ.
ಬಂದೂಕು ಸಂಸ್ಕೃತಿ (gun culture) ವ್ಯಾಪಕವಾಗಿರುವ ಯುನೈಟೆಡ್ ಸ್ಟೇಟ್ಸ್ ಈ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳನ್ನು ದಾಖಲಿಸಿದೆ. ಗನ್ ವಯಲೆನ್ಸ್ ಆರ್ಕೈವ್ ಎಂಬ ಸರ್ಕಾರೇತರ ಸಂಸ್ಥೆಯು ಸಾಮೂಹಿಕ ಗುಂಡಿನ ದಾಳಿ ಎಂದರೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗಾಯಗೊಂಡ ಅಥವಾ ಸಾವು ಸಂಭವಿಸಿದ ಪ್ರಕರಣಗಳು ಎಂದು ವ್ಯಾಖ್ಯಾನಿಸುತ್ತದೆ.
ಇದನ್ನೂ ಓದಿ: Texas Shooting: ಟೆಕ್ಸಾಸ್ ಶಾಪಿಂಗ್ ಮಾಲ್‌ನಲ್ಲಿ ಅಪರಿಚಿತನ ಗುಂಡಿನ ದಾಳಿ, 9 ಸಾವು