ಇಂಡಿಯಾನಾ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೂಟೌಟ್ ಮುಂದುವರಿದಿವೆ. ಇಂಡಿಯಾನಾ ರಾಜ್ಯದಲ್ಲಿರುವ ಗ್ರೀನ್‌ವುಡ್ ಪಾರ್ಕ್ ಮಾಲ್‌ನ ಫುಡ್‌ಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹೀಗೆ ಒಂದೇ ಸಮ ಗುಂಡು ಹಾರಿಸುತ್ತಿದ್ದ ಈ ಹಂತಕನನ್ನು ಸ್ಥಳದಲ್ಲಿದ್ದ ನಾಗರಿಕನೊಬ್ಬ ಹತ್ಯೆಗೈದಿದ್ದಾನೆ. ತನ್ನ ಬಳಿ ಇರುವ ಪಿಸ್ತೂಲ್‌ನಿಂದ ಫೈರಿಂಗ್ ಮಾಡುತ್ತಿದ್ದವನಿಗೇ ಗುಂಡು ಹಾರಿಸಿದ್ದಾನೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಜಿಮ್ ಐಸೋನ್ ತಿಳಿಸಿದ್ದಾರೆ.
ಗ್ರೀನ್‌ವುಡ್ ಪಾರ್ಕ್ ಮಾಲ್‌ನಲ್ಲಿ ಶೂಟೌಟ್ ನಡೆಯುತ್ತಿದೆ ಎಂಬ ಮಾಹಿತಿ ಸಂಜೆ ಸುಮಾರು 6 ಗಂಟೆ ಹೊತ್ತಿಗೆ ನಮಗೆ ಮಾಹಿತಿ ಸಿಕ್ಕಿತು. ನಾವು ಮಾಲ್‌ಗೆ ಹೋದಾಗ ಅಲ್ಲಿನ ಫುಡ್‌ಕೋರ್ಟ್‌ನಲ್ಲಿ ಫೈರಿಂಗ್ ಆಗಿದ್ದು ಗೊತ್ತಾಯಿತು. ಅಷ್ಟರಲ್ಲಾಗಲೇ ಆರೋಪಿಯನ್ನೂ ಹತ್ಯೆಗೈಯ್ಯಲಾಗಿತ್ತು. ಸ್ಥಳವನ್ನೆಲ್ಲ ಸಂಪೂರ್ಣವಾಗಿ ಸರ್ಚ್ ಮಾಡಿದಾಗ ಫುಡ್ ಕೋರ್ಟ್‌ನ ಬಾತ್‌ರೂಂನಲ್ಲಿ ಅನುಮಾನಾಸ್ಪದ ಬ್ಯಾಕ್‌ಪ್ಯಾಕ್ (ಬೆನ್ನಿಗೆ ಹಾಕುವ ದೊಡ್ಡ ಬ್ಯಾಗ್) ಕಂಡುಬಂದಿದೆ. ಅದನ್ನು ವಶಪಡಿಸಿಕೊಂಡಿದ್ದೇವೆ ಎಂದೂ ಐಸೋನ್ ಹೇಳಿದ್ದಾರೆ
ಇತ್ತೀಚೆಗೆ ಯುಎಸ್‌ನಲ್ಲಿ ಪದೇಪದೆ ಗುಂಡಿನ ದಾಳಿ ನಡೆಯುತ್ತಿದೆ. ಜುಲೈ 4ರಂದು ಚಿಕಾಗೋದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ವೇಳೆ ಪರೇಡ್ ಮೇಲೆ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದ. ಇದರಲ್ಲಿ ಆರು ಮಂದಿ ಮೃತಪಟ್ಟಿದ್ದರು. 36 ಜನರಿಗೆ ಗಾಯವಾಗಿತ್ತು. ಅದಕ್ಕೂ ಮೊದಲು ಮೇ 24ರಂದು ಅಮೆರಿಕದ ಟೆಕ್ಸಾಸ್‌ನ ಎಲಿಮೆಂಟರಿ ಶಾಲೆಯಲ್ಲಿ ಭಯಾನಕವಾದ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ 19ಮಕ್ಕಳು, ಇಬ್ಬರು ಶಿಕ್ಷಕರು ಮೃತಪಟ್ಟಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಒಂದೇ ರಾತ್ರಿಯಲ್ಲಿ 3 ಕಡೆ ಶೂಟೌಟ್; 9 ಮಂದಿ ಸಾವು, 28 ಜನರಿಗೆ ಗಾಯ