Site icon Vistara News

Harry Potter | ಮುಂದಿನ ಟಾರ್ಗೆಟ್ ನೀನೇ, ರಶ್ದಿ ಮೇಲಿನ ದಾಳಿ ಖಂಡಿಸಿದ ಹ್ಯಾರಿ ಪಾಟರ್‌ ಲೇಖಕಿಗೆ ಬೆದರಿಕೆ

Harry Potter

ಲಂಡನ್:‌ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ (Salman Rushdie) ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಹ್ಯಾರಿ ಪಾಟರ್‌ (Harry Potter) ಸರಣಿ ಕಾದಂಬರಿಗಳ ಲೇಖಕಿ ಜೆ.ಕೆ. ರೋಲಿಂಗ್‌ (JK Rowling) ಅವರಿಗೂ ಸಾರ್ವಜನಿಕವಾಗಿ ಬೆದರಿಕೆ ಹಾಕಲಾಗಿದೆ. “ನೀನೇ ಮುಂದಿನ ಟಾರ್ಗೆಟ್”‌ ಎಂದು ಬೆದರಿಕೆ ಒಡ್ಡಲಾಗಿದೆ.

ಇರಾನ್‌ ಮೂಲದ ಮೂಲಭೂತವಾದಿ ಒಬ್ಬನಿಂದ ಜೀವ ಬೆದರಿಕೆ ಹಾಕಲಾಗಿದ್ದು, ಇದನ್ನು ಜೆ.ಕೆ. ರೋಲಿಂಗ್‌ ಅವರೇ ದೃಢಪಡಿಸಿದ್ದಾರೆ. “ಭಯಂಕರ ಸುದ್ದಿಯೊಂದು ಗೊತ್ತಾಗಿದೆ. ಇದನ್ನು ತಿಳಿಯುತ್ತಲೇ ನಾನು ಆತಂಕಕ್ಕೀಡಾಗಿದ್ದೇನೆ. ನನಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಿದೆ” ಎಂದು ಲೇಖಕಿ ಟ್ವೀಟ್‌ ಮಾಡಿದ್ದಾರೆ.

ಮೀರ್‌ ಆಸಿಫ್‌ ಅಜೀಜ್‌ ಎಂಬ ಟ್ವಿಟರ್‌ ಖಾತೆಯಿಂದ ಬೆದರಿಕೆ ಹಾಕಲಾಗಿದ್ದು, ಆತನ ಬಯೋದಲ್ಲಿ ವಿದ್ಯಾರ್ಥಿ, ಸಾಮಾಜಿಕ ಕಾರ್ಯಕರ್ತ, ರಾಜಕೀಯ ಕಾರ್ಯಕರ್ತ ಹಾಗೂ ಸಂಶೋಧನಾ ಕಾರ್ಯಕರ್ತ ಎಂದು ಬರೆದುಕೊಂಡಿದ್ದಾನೆ. ಹಾಗೆಯೇ, ಸಲ್ಮಾನ್‌ ರಶ್ದಿ ಮೇಲೆ ದಾಳಿ ಮಾಡಿದ ಹದಿ ಮಾಟರ್‌ನನ್ನು ಹೊಗಳಿದ್ದಾನೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಶ್ದಿ, ಭಾಷಣ ಮಾಡಲು ವೇದಿಕೆ ಮೇಲೇರುತ್ತಲೇ ಹದಿ ಮಾಟರ್‌ ಚಾಕು ಇರಿದ್ದು ಹಲ್ಲೆ ನಡೆಸಿದ್ದ. ಸದ್ಯ, ರಶ್ದಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಜೆ.ಕೆ.‌ ರೋಲಿಂಗ್ ಅವರು ಬ್ರಿಟನ್‌ ಲೇಖಕಿಯಾಗಿದ್ದು, ಹ್ಯಾರಿ ಪಾಟರ್‌ ಎಂಬ ಸರಣಿ ಕಾದಂಬರಿಗಳ ಮೂಲಕ ವಿಶ್ವವಿಖ್ಯಾತಿಯಾಗಿದ್ದಾರೆ. ಹ್ಯಾರಿ ಪಾಟರ್‌ ಸರಣಿಯ ಏಳು ಪುಸ್ತಕಗಳು ಜಗತ್ತಿನ ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗಿದೆ.

ಇದನ್ನೂ ಓದಿ | ಹಲ್ಲೆಗೆ ಒಳಗಾದ ಬರಹಗಾರ ಸಲ್ಮಾನ್‌ ರಶ್ದಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ

Exit mobile version